ಕಮಿಷನರ್ ಆಳ್ವಿಕೆ ನಂತರ ಮೈಸೂರು ಆಡಳಿತ :-
೫೦ ವರ್ಷಗಳ ಬ್ರಿಟಿಷರ ಆಡಳಿತದ ನಂತರ ಮೈಸೂರು ರಾಜ್ಯದ ಉಸ್ತುವಾರಿ ಒಡೆಯರಿಗೆ ವಾಪಸಾಗಲಾಗಿ ೧೮೮೧ ರ ಮಾರ್ಚ್ ೨೫ ರಂದು ೧೦ನೇ ಚಾಮರಾಜ ಒಡೆಯರ್ ಸಿಂಹಾಸನವೇರಿದರು. ಇವರಿಗೆ ಬ್ರಿಟಿಷ್ ರೆಸಿಡೆಂಟನಾಗಿ ಜೆ. ಡಿ. ಗೋರ್ಡನ್ ಹಾಗೂ ದಿವಾನರಾಗಿ ಸಿ. ರಂಗಚಾರ್ಲುರವರು ನೇಮಕಗೊಂಡರು. ೧೮೮೧ ರ ಮಾರ್ಚ್ ೨೫ ರಂದು ೧೦ನೇ ಚಾಮರಾಜ ಒಡೆಯರ್ ಸಿಂಹಾಸನವೇರಿದರು. ಇವರಿಗೆ ಬ್ರಿಟಿಷ್ ರೆಸಿಡೆಂಟನಾಗಿ ಜೆ. ಡಿ. ಗೋರ್ಡನ್ ಹಾಗೂ ದಿವಾನರಾಗಿ ಸಿ. ರಂಗಚಾರ್ಲುರವರು ನೇಮಕಗೊಂಡರು. ೧೮೮೧ ರ ದಸರಾ ಅವಧಿಯಲ್ಲಿ 'ಪ್ರಜಾಪ್ರತಿನಿಧಿ ಸಭೆ' ಯನ್ನು ಸ್ಥಾಪಿಸಲಾಯಿತು. ಅದೇ ವರ್ಷ ಕೋಲಾರದಲ್ಲಿ ಚಿನ್ನದ ಗಣಿ ಪ್ರಾರಂಭವಾಯಿತು. ೧೮೮೩ ರಲ್ಲಿ ನಿಧನರಾದ ರಂಗಚಾರ್ಲು ನಂತರ ಕೆ. ಶೇಷಾದ್ರಿ ಅಯ್ಯರ್ ದಿವಾನರಾಗಿ ನೇಮಕವಾದರು. ಇವರ ಕಾಲದಲ್ಲಿ ೧೮೮೪ ರಲ್ಲಿ ತಾಲ್ಲೂಕು ಬೋರ್ಡುಗಳನ್ನು ಸ್ಥಾಪಿಸಲಾಯಿತು. ೧೮೯೩ ರಲ್ಲಿ ಮೈಸೂರು - ನಂಜನಗೂಡು ರೈಲು ಮಾರ್ಗ, ೧೮೯೯ ರಲ್ಲಿ ಬೀರೂರು - ಶಿವಮೊಗ್ಗ ರೈಲು ಮಾರ್ಗ ನಿರ್ಮಾಣಗೊಂಡವು. ೧೮೯೯-೧೯೦೦ ರ ಅವಧಿಯಲ್ಲಿ ಶಿವನಸಮುದ್ರ ಜಲವಿದ್ಯುತ್ ಯೋಜನೆ ಪ್ರಾರಂಭವಾಯಿತು. ಮೃಗಾಲಯ ಸಹ ಇವರ ಅವಧಿಯಲ್ಲೇ ಪ್ರಾರಂಭವಾಯಿತು. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ ಶೇಷಾದ್ರಿ ಅಯ್ಯರರವರು ೧೯೦೧ ರಲ್ಲಿ ನಿವೃತ್ತರಾಗಿ ಅದೇ ವರ್ಷ ತೀರಿಕೊಂಡರು. ಈ ಮಧ್ಯೆ ಚಾಮರಾಜ ಒಡೆಯರ್ ಸಹ ಡಿಫ್ತಿರಿಯಾ ರೋಗಕ್ಕೆ ತುತ್ತಾಗಿ ೧೮೯೪ ರಲ್ಲಿ ತೀರಿಕೊಂಡಿದ್ದರು. ೧೮೯೫ ರಲ್ಲಿ ಸಿಂಹಾಸನವೇರಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅಪ್ರಾಪ್ತರಾಗಿದ್ದ ಕಾರಣ ಮಹಾರಾಣಿ ಕೆಂಪರಾಜಮ್ಮಣ್ಣಿಯವರು ರೀಜೆಂಟರಾಗಿ ರಾಜ್ಯಭಾರ ನೋಡಿಕೊಂಡರು. ೧೯೦೨ ರಲ್ಲಿ ಕೃಷ್ಣರಾಜ ಒಡೆಯರ್ ನೇರ ಆಳ್ವಿಕೆ ಪ್ರಾರಂಭಿಸಿದರು. ಇವರು ೧೯೦೭ ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಜೊತೆಗೆ ನ್ಯಾಯ ವಿಧಾಯಕ ಸಭೆಯನ್ನು ರಚಿಸಿದರು. ಸರ್. ಎಂ. ವಿಶ್ವೇಶ್ವರಯ್ಯನವರು ೧೯೧೨ ರಲ್ಲಿ ದಿವಾನರಾಗಿ ನೇಮಕಗೊಂಡರು. ಇವರ ಅವಧಿಯಲ್ಲಿ ಕನ್ನಂಬಾಡಿ ಆಣೆಕಟ್ಟೆಯ ನಿರ್ಮಾಣ ಕಾರ್ಯ ೧೯೧೧ ರಲ್ಲಿ ಪ್ರಾರಂಭವಾಯಿತು. ೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು. ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭವಾಯಿತು. ೧೯೧೭ ರಲ್ಲಿ ಚನ್ನಪಟ್ಟಣದ ಬಳಿ ರೇಷ್ಮೆ ಬೆಳೆಯ ಅಧ್ಯಯನಕ್ಕಾಗಿ ಒಂದು ಸಂಶೋಧನಾ ಸಂಸ್ಥೆ ಸ್ಥಾಪಿತವಾಯಿತು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಹ ವಿಶ್ವೇಶ್ವರಯ್ಯನವರ ಕೊಡುಗೆಯೇ. ೧೯೧೮ರಲ್ಲಿ ಅವರು ದಿವಾನಗಿರಿಗೆ ರಾಜೀನಾಮೆ ನೀಡಿದ ನಂತರ ಎಂ. ಕಾಂತರಾಜೇ ಅರಸ್ (೧೯೧೮-೨೨), ಎ. ಆರ್. ಬ್ಯಾನರ್ಜಿ (೧೯೨೨-೨೬) ದಿವಾನರಾಗಿ ಕಾರ್ಯ ನಿರ್ವಹಿಸಿದರು. ೧೯೨೬ ರಲ್ಲಿ ದಿವಾನರಾಗಿ ನೇಮಕವಾದ ಮಿರ್ಜಾ ಇಸ್ಮಾಯಿಲ್ ಕಾಲದಲ್ಲಿ ೧೯೩೨ ರಲ್ಲಿ ಕನ್ನಂಬಾಡಿ ಆಣೆಕಟ್ಟೆಯ ನಿರ್ಮಾಣ ಪೂರ್ಣಗೊಂಡಿತು. ಇವರು ಇರ್ವಿನ್ ನಾಲೆಯನ್ನು ನಿರ್ಮಿಸಿದರು. ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಸಿಮೆಂಟ್ ಮತ್ತು ಕಾಗದ ಕಾರ್ಖಾನೆ, ಹಿಂದೂಸ್ತಾನ್ ವಿಮಾನ ಕಾರ್ಖಾನೆ, ವಿದ್ಯುಚ್ಛಕ್ತಿ ಉಪಕರಣಗಳ ಕಾರ್ಖಾನೆ ಇವರ ಅವಧಿಯಲ್ಲಿ ಸ್ಥಾಪಿತವಾದವು. ೧೯೨೬ ರಲ್ಲಿ ನಂಜನಗೂಡು - ಚಾಮರಾಜನಗರ ನಡುವಿನ ರೈಲು ಮಾರ್ಗ ಪೂರ್ಣಗೊಂಡಿತು. ಕನ್ನಂಬಾಡಿ ಆಣೆಕಟ್ಟುಗಳ ಕೆಳಗಡೆ ಬೃಂದಾವನ ಉದ್ಯಾನವನ್ನು ಕೂಡ ಪ್ರಾರಂಭಿಸಿದರು. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದರು. ಅಗಸ್ಟ್ ೧೯೪೦ ರಲ್ಲಿ ನಿಧನರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾನದಲ್ಲಿ ಶ್ರೀಜಯಚಾಮರಾಜ ಒಡೆಯರ್ ಸಿಂಹಾಸನವೇರಿದರು. ಮಿರ್ಜಾ ಇಸ್ಮಾಯಿಲ್ ೧೯೪೧ ರಲ್ಲಿ ದಿವಾನ ಪದವಿಯಿಂದ ನಿವೃತ್ತರಾದರು. ಇವರ ನಂತರ ನ್ಯಾಪತಿ ಮಾಧವರಾಯರು ದಿವಾನರಾದರು. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಸ್ವತಂತ್ರ ಚಳುವಳಿ ತೀವ್ರವಾಗಿತ್ತು. ೧೯೪೧ ಮತ್ತು ೧೯೪೫ ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಚುನಾವಣೆಗಳು ನಡೆದವು. ೧೯೪೫ ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ೧೯೪೬ ರಲ್ಲಿ ದಿವಾನರಾಗಿ ನೇಮಕಗೊಂಡ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮೈಸೂರು ರಾಜ್ಯದ ಕೊನೆಯ ದಿವಾನರು. ಮೈಸೂರು ರಾಜ್ಯದಲ್ಲಿ ಸ್ವಾತಂತ್ರ್ಯ ಚಳವಳಿ ಜೊತೆಗೆ ಜವಾಬ್ದಾರಿ ಸರ್ಕಾರದ ರಚನೆಗಾಗಿ ಸಹ ಚಳುವಳಿಗಳು ಪ್ರಾರಂಭವಾದವು. ಅಗಸ್ಟ್ ೧೯೪೭ ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರ ಸೆಪ್ಟೆಂಬರ್ ೧೯೪೭ ರಲ್ಲಿ ಜಯಚಾಮರಾಜ ಒಡೆಯರ್ ಜವಾಬ್ದಾರಿ ಸರ್ಕಾರ ರಚನೆಗೆ ಒಪ್ಪಿಕೊಂಡರು. ೧೯೪೭ ರ ಅಕ್ಟೋಬರ್ ೨೪ರಂದು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಲಾಗಿ ಕಾಂಗ್ರೆಸ್ ನ ಚಂಗಲ್ ರಾಯರೆಡ್ಡಿ ಮೈಸೂರಿನ ಪ್ರಥಮ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡುರು. ೧೯೫೬ ರಲ್ಲಿ ಮಹಾರಾಜರ ಪದವಿ ರದ್ದಾದ ಮೇಲೆ ಜಯಚಾಮರಾಜ ಒಡೆಯರ್ ಮೈಸೂರಿನ ರಾಜಪ್ರಮುಖರಾಗಿ ನೇಮಕಗೊಂಡರಲ್ಲದೆ ಅನಂತರ ಮದ್ರಾಸಿನ ರಾಜಪ್ರಮುಖರಾಗಿ ಕಾರ್ಯ ನಿರ್ವಹಿಸಿದರು. ಅವರು ೧೯೭೪ ರ ಸೆಪ್ಟೆಂಬರ್ ೨೪ ರಂದು ನಿಧನರಾದರು.
Saturday, 31 March 2018
ಕಮಿಷನರ್ ಆಳ್ವಿಕೆ ನಂತರ ಮೈಸೂರು ಆಡಳಿತ :-
Friday, 30 March 2018
ಕಮಿಷನರುಗಳ ಆಳ್ವಿಕೆ (ಕ್ರಿ. ಶ. ೧೮೩೧-೮೧)
ಕಮಿಷನರುಗಳ ಆಳ್ವಿಕೆ :-
ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ ಕರ್ನಲ್ ಜೆ. ಬ್ರಿಗ್ಸ್ ಹಿರಿಯ ಕಮಿಷನರ್ ಆಗಿ ಮತ್ತು ಲೂಷಿಂಗ್ ಟನ್ ಕಿರಿಯ ಕಮಿಷನರ್ ಆಗಿ ಇಬ್ಬರು ಅಧಿಕಾರ ನಡೆಸಿದರು. ಇವರ ನಂತರ ರಾಜ್ಯದ ಆಡಳಿತವು ಒಬ್ಬನೇ ಕಮಿಷನರನ ಆಡಳಿತಕ್ಕೆ ಒಳಪಟ್ಟಿತು. ಕ್ರಿ. ಶ. ೧೮೩೪ ರಲ್ಲಿ ನೇಮಕವಾದ ಮಾರ್ಕ್ ಕಬ್ಬನ್ ಕ್ರಿ. ಶ. ೧೮೬೧ ರವರೆಗೆ ಅಧಿಕಾರ ನಡೆಸಿದನು. ಇವನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾದವಲ್ಲದೆ, ಕ್ರಿ. ಶ. ೧೮೫೯ ರಲ್ಲಿ ಬೆಂಗಳೂರಿನ ಜೋಲಾರಪೇಟೆಗೆ ರಾಜ್ಯದ ಮೊಟ್ಟ ಮೊದಲನೇ ರೈಲು ಮಾರ್ಗ ನಿರ್ಮಾಣವಾಯಿತು. ಕ್ರಿ. ಶ. ೧೮೫೮ ರಲ್ಲಿ ಸಾರ್ವಜನಿಕ ವಿದ್ಯಾ ಇಲಾಖೆಯನ್ನು ರೂಪಿಸಿದ ಇವನು ಬೆಂಗಳೂರು, ತುಮಕೂರು, ಮೈಸೂರು, ಶಿವಮೊಗ್ಗ, ಮುಂತಾದೆಡೆ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಿದನು. ಇವನ ನಂತರ ಸಿ. ಬಿ. ಸ್ಯಾಂಡರ್ಸ್ (ಕ್ರಿ. ಶ. ೧೮೬೧-೬೨) ತಾತ್ಕಾಲಿಕ ಕಮಿಷನರ್ ಆಗಿದ್ದನು. ಕ್ರಿ. ಶ. ೧೮೬೨ ರಲ್ಲಿ ಲೂಯಿಸ್ ಬೆಂಥಾಂ ಬೌರಿಂಗ್ ಮೈಸೂರು ರಾಜ್ಯದ ಕಮಿಷನರ್ ಆಗಿ ನೇಮಕಗೊಂಡರು. ೧೮೭೦ ರವರೆಗೆ ಅಧಿಕಾರ ನಡೆಸಿದ ಇವರ ಅವಧಿಯಲ್ಲಿ ೧೮೬೩ ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸೆರೆಮನೆಯನ್ನು, ೧೮೬೪ ರಲ್ಲಿ ಹೈಕೋರ್ಟನ್ನು ಸ್ಥಾಪಿಸಲಾಯಿತು. ೧೮೬೮ ರಲ್ಲಿ ಅಠಾರ ಕಛೇರಿಯ ಕಟ್ಟಡ ನಿರ್ಮಾಣವಾಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕಟ್ಟಡ ಸಹ ೧೮೬೦ ರಲ್ಲಿ ಇವರ ಅವಧಿಯಲ್ಲಿ ನಿರ್ಮಾಣವಾಯಿತು. ಇವರ ಅವಧಿಯಲ್ಲೇ ಮೈಸೂರು ಸಂಸ್ಥಾನದ ಆಡಳಿತವನ್ನು ಮುಮ್ಮಡಿ ಕೃಷ್ಣರಾಜರ ದತ್ತು ಮಗ ೧೦ನೇ ಚಾಮರಾಜೇಂದ್ರರಿಗೆ ೧೮ ವರ್ಷ ತುಂಬಿದಾಕ್ಷಣ ಹಿಂದಿರುಗಿಸಲು ನಿರ್ಧಾರವಾಯಿತು.
ಬೌರಿಂಗರ ನಂತರ ರಿಚರ್ಡ್ ಮೀಡ್ (೧೮೭೦-೭೫), ಸ್ಯಾಂಡರ್ಡ್ (೧೮೭೫-೭೭) ಮತ್ತು ಜೆ. ಡಿ. ಗೋರ್ಡನ್ (೧೮೭೮-೮೧) ಕಮಿಷನರ್ ಆಗಿ ಅಧಿಕಾರ ನಡೆಸಿದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ (ಕ್ರಿ. ಶ. ೧೭೯೯-೧೮೩೧)
ಮುಮ್ಮಡಿ ಕೃಷ್ಣರಾಜ ಒಡೆಯರ್ :-
ಮುಮ್ಮಡಿ ಕೃಷ್ಣರಾಜ ಒಡೆಯರ್ ಖಾಸಾ ಚಾಮರಾಜ ಒಡೆಯರ ಪತ್ನಿ ಲಕ್ಷ್ಮಿಮ್ಮಣ್ಣಿಯ ಮಗನಾಗಿ ೧೭೯೪ ರಲ್ಲಿ ಜನಿಸಿದರು. ಟಿಪ್ಪುವು ಕ್ರಿ. ಶ. ೧೭೯೯ ರಲ್ಲಿ ಅಂತ್ಯಗೊಂಡ ಮೇಲೆ ಬ್ರಿಟಿಷರು ಇವರನ್ನು ಮೈಸೂರಿನ ಅರಸರನ್ನಾಗಿ ಮಾಡಿದ್ದಲ್ಲದೆ, ಜುಲೈ ೧೭೯೯ ರಲ್ಲಿ ಸಹಾಯಕ ಸೈನ್ಯ ಪದ್ಧತಿಯ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿಸಿದರು. ಇವರಿಗೆ ಕೇವಲ ೫ ವರ್ಷ ವಯಸ್ಸಾದುದರಿಂದ ಮಹಾರಾಣಿ ಲಕ್ಷ್ಮಿಮ್ಮಣ್ಣಿಯವರು ರಾಜಪ್ರತಿನಿಧಿಯಾಗಿದ್ದುಕೊಂಡು ಆಡಳಿತದ ಜವಾಬ್ದಾರಿಯನ್ನು ದಿವಾನ್ ಪೂರ್ಣಯ್ಯ (ಕ್ರಿ. ಶ. ೧೭೯೯-೧೮೧೧) ನವರಿಗೆ ವಹಿಸಿದರು. ಆಡಳಿತದ ಅನೂಕೂಲಕ್ಕಾಗಿ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾವಣೆ ಮಾಡಲಾಯಿತು. ಪೂರ್ಣಯ್ಯನವರು ಹಲವಾರು ದಂಗೆಗಳನ್ನು ಅಡಗಿಸಿದರು. ೧೮೧೧ ರಲ್ಲಿ ಪೂರ್ಣಯ್ಯನವರು ನಿವೃತ್ತರಾದ ಮೇಲೆ ಮುಮ್ಮಡಿ ಕೃಷ್ಣರಾಜ ಒಡೆಯರು ರಾಜ್ಯದ ಆಡಳಿತವನ್ನು ವಹಿಸಿಕೊಂಡರು. ಆಡಳಿತದಲ್ಲಿ ಹಲವಾರು ಸುಧಾರಣೆಗಳನ್ನು ತಂದರಾದರೂ, ಹಲವೆಡೆ ದಂಗೆಗಳೆದ್ದು, ಅಧಿಕಾರಿಗಳ ಅದಕ್ಷತೆಯಿಂದ ಕಂದಾಯ ಹಾಗೂ ತೆರಿಗೆಗಳು ಸರಿಯಾಗಿ ವಸೂಲಾಗಲಿಲ್ಲ. ಇದರಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅಸಮರ್ಥರೆಂದು ತೀರ್ಮಾನಿಸಿ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಕ್ರಿ. ಶ. ೧೮೩೧ ರಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಆಡಳಿತವನ್ನು ತಾನೇ ವಹಿಸಿಕೊಂಡನು. ಹೀಗಾಗಿ ಕ್ರಿ. ಶ. ೧೮೩೧ ರಿಂದ ೧೮೮೧ ರವರೆಗೆ ಮೈಸೂರು ಸಂಸ್ಥಾನದ ಆಡಳಿತವನ್ನು ಬ್ರಿಟಿಷ್ ಕಮಿಷನರಗಳು ನಡೆಸಿದರು.
Thursday, 29 March 2018
ಹೈದರಾಲಿ ಮತ್ತು ಟಿಪ್ಪು ಸುಲ್ತಾನ್
ಹೈದರಾಲಿ (ಕ್ರಿ. ಶ. ೧೭೬೧-೮೨):-
ಹೈದರಾಲಿಯು ಕ್ರಿ. ಶ. ೧೭೨೧ ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದನು. ಸೈನಿಕ ತರಬೇತಿ ಪಡೆದಿದ್ದ ಈತ ಮೈಸೂರು ಸೈನ್ಯವನ್ನು ಸೇರಿಕೊಂಡು, ಕ್ರಿ. ಶ. ೧೭೪೯ ರಲ್ಲಿ ನಡೆದ ದೇವನಹಳ್ಳಿಯ ಮುತ್ತಿಗೆಯಲ್ಲಿ ಅಪ್ರತಿಮ ಸಾಹಸ ತೋರಿ ಅಂದಿನ ದಳವಾಯಿ ನಂಜರಾಜಯ್ಯನ ಗಮನ ಸೆಳೆದನು. ನಂಜರಾಜಯ್ಯನು ಇವನನ್ನು ತುಕಡಿಯೊಂದರ ನಾಯಕನನ್ನಾಗಿ ನೇಮಿಸಿದನು. ಕ್ರಿ. ಶ. ೧೭೫೫ ರಲ್ಲಿ ಹೈದರನು ದಿಂಡಿಗಲ್ಲಿನ ಪೌಜುದಾರನಾಗಿ ನೇಮಕವಾದನು. ದಿಂಡಿಗಲ್ಲಿನಲ್ಲಿದ್ದಾಗ ಮೈಸೂರನ್ನು ಮುತ್ತಿದ್ದ ಮರಾಠರನ್ನು ಸೋಲಿಸಿ ಓಡಿಸಿದನು. ನಂಜರಾಜಯ್ಯನು ತನ್ನ ಸೈನಿಕರಿಗೆ ಸಂಬಳ ನೀಡಲು ಹಣ ಇಲ್ಲದಾಗ, ಅದನ್ನು ನೀಡಿದ ಹೈದರನಿಗೆ ಕೆಲವು ತಾಲ್ಲೂಕುಗಳನ್ನು ಬಿಟ್ಟು ಕೊಟ್ಟನು. ಅಸಮರ್ಥನಾಗಿದ್ದ ನಂಜರಾಜನನ್ನು ಕೆಳಗಿಳಿಸಿ ಅವನ ತಮ್ಮ ಬೆಟ್ಟದ ಚಾಮರಾಜ ಒಡೆಯರನ್ನು ಕ್ರಿ. ಶ. ೧೭೭೦ ರಲ್ಲಿ ಸಿಂಹಾಸನವೇರಿದನು. ಇಲ್ಲಿಗೆ ದಳವಾಯಿಗಳ ಆಳ್ವಿಕೆ ಕೊನೆಗೊಂಡು, ಹೈದರನು ಪ್ರಬಲನಾಗುತ್ತಾ ಹೋದನು. ತನ್ನನ್ನು ವಿರೋಧಿಸಿದ ದಿವಾನ ಖಂಡೇರಾಯನನ್ನು ಹೈದರನು ಬಂಧಿಸಿದನು. ಕ್ರಿ. ಶ. ೧೭೭೬ ರಲ್ಲಿ ಬೆಟ್ಟದ ಚಾಮರಾಜ ಒಡೆಯರ್ ಕೊಲೆಯಾಗಲಾಗಿ, ಖಾಸಾ ಚಾಮರಾಜ (ಕ್ರಿ. ಶ. ೧೭೭೬-೯೬)ರನ್ನು ಪಟ್ಟಕ್ಕೆ ತಂದ ಹೈದರನು ಇವರೆಲ್ಲಾ ಅಸಮರ್ಥರಾದ ಕಾರಣ, ದಳವಾಯಿ ನಂಜರಾಜನನ್ನು ಮಂತ್ರಿಯಾಗಿ ಮಾಡಿಕೊಂಡು ತಾನೇ ಸರ್ವಾಧಿಕಾರಿಯಾದನು.
ರಾಜರನ್ನು ಗೌರವಿಸುತಿದ್ದ ಹೈದರನು ಬೆಂಗಳೂರು, ಶ್ರೀರಂಗಪಟ್ಟಣದಲ್ಲಿ ಅರಮನೆಗಳನ್ನು ನಿರ್ಮಿಸಿದನು. ಚಿಕ್ಕಬಳ್ಳಾಪುರ, ಪೆನುಗೊಂಡೆ ಮುಂತಾದವುಗಳನ್ನು ಗೆದ್ದು ರಾಜ್ಯ ವಿಸ್ತರಿಸಿದಲ್ಲದೇ ಸಿರಾಕೋಟೆ ವಶಪಡಿಸಿಕೊಂಡನು. ಕ್ರಿ. ಶ. ೧೭೬೩ ರಲ್ಲಿ ಇಕ್ಕೇರಿ ಪ್ರಾಂತವನ್ನು ಗೆದ್ದುಕೊಂಡನು. ಮೂರು ಬಾರಿ ದಾಳಿ ಮಾಡಿದ ಮರಾಠರೊಂದಿಗೆ ಒಪ್ಪಂದ ಮಾಡಿಕೊಂಡನು. ಇವನ ಏಳಿಗೆಯನ್ನು ಸಹಿಸದಾದ ಬ್ರಿಟಿಷರ ನಡುವೆ ಕ್ರಿ. ಶ. ೧೭೬೭ ರಲ್ಲಿ ಮೊದಲನೇ ಆಂಗ್ಲೊ ಮೈಸೂರು ಯುದ್ಧ ನಡೆಯಿತು. ಆಗ ಬ್ರಿಟಿಷರಿಗೆ ಸೋಲಾಯಿತು. ಕ್ರಿ. ಶ. ೧೭೬೯ ರಲ್ಲಿ ಹೈದರನು ಬ್ರಿಟಿಷರ ಕೆಲವೊಂದು ಪ್ರದೇಶಗಳನ್ನು ಗೆಲ್ಲುತ್ತಾ ಮದ್ರಾಸ್ ವರೆಗೂ ಹೋದನು . ಹಾಗಾಗಿ ಕ್ರಿ. ಶ. ೧೭೬೯ ರಲ್ಲಿ ಬ್ರಿಟಿಷರ ನಡುವೆ ನಡೆದ ಮದ್ರಾಸ್ ಒಪ್ಪಂದವಾಗಿ, ಬ್ರಿಟಿಷರು ಮತ್ತು ಹೈದರನು ಪರಸ್ಪರ ಆಕ್ರಮಣ ಮಾಡಬಾರದು ಹಾಗೂ ಪರಸ್ಪರಿಗೆ ಸಹಾಯ ಮಾಡಬೇಕು ಎಂಬ ತೀರ್ಮಾನವಾಯಿತು. ಹೀಗಿದ್ದೂ ಹೈದರನ ಮೇಲೆ ಮರಾಠರು ದಾಳಿ ಮಾಡಿದಾಗ ಬ್ರಿಟಿಷರು ಅವನಿಗೆ ಸಹಾಯ ಮಾಡಲಿಲ್ಲ. ಹಾಗಾಗಿ ಬ್ರಿಟಿಷರ ಮೇಲೆ ಮತ್ತೆ ದ್ವೇಷ ಬೆಳೆಯಿತು.
ನಂತರ ಎರಡನೇ ಆಂಗ್ಲ-ಮೈಸೂರು ಯುದ್ಧ ಕ್ರಿ. ಶ. ೧೭೮೦ ರಲ್ಲಿ ಪ್ರಾರಂಭವಾಯಿತು. ಕ್ರಿ. ಶ. ೧೭೮೦ ರಲ್ಲಿ ದೇಶೀಯ ರಾಜರೆಲ್ಲಾ ಬ್ರಿಟಿಷರನ್ನು ಓಡಿಸಲು ಕೂಟವನ್ನು ರಚಸಿಕೊಂಡರಾದರೂ ಅದು ಫಲಪ್ರದವಾಗಲಿಲ್ಲ. ಕೂಟದಲ್ಲಿ ಶ ಸೇರಿದ್ದ ಹೈದರನು ಯುದ್ಧ ಮುಂದುವರೆಸಿ ಪಾಲಿಲೂರ್ ಬಳಿ ಬ್ರಿಟಿಷರನ್ನು ಸೋಲಿಸಿದನು. ೧೭೮೦ ಅಕ್ಟೋಬರ್ ನಲ್ಲಿ ಹೈದರನು ಅರ್ಕಾಟನ್ನು ವಶ ಪಡಿಸಿಕೊಂಡನು. ೧೭೮೨ ರ ಜುಲೈನಲ್ಲಿ ಪೋರ್ಟಿನೋವ ಬಳಿ ಬ್ರಿಟಿಷರು ಅವನನ್ನು ಸೋಲಿಸಿದರಲ್ಲದೆ, ಮತ್ತೊಮ್ಮೆ ಸೋಲಿಸಿದರು. ಅನಂತರ ಪ್ರಬಲ ಸೈನ್ಯದೊಂದಿಗೆ ಹೋದ ಹೈದರನು ಬ್ರಿಟಿಷರನ್ನು ತಂಜಾವೂರಿನ ಬಳಿ ಸೋಲಿಸಿದನು. ಆಮೇಲೆ ಕ್ರಿ. ಶ. ೧೭೮೨ರ ಡಿಸೆಂಬರ್ ೭ ರಂದು ಚಿತ್ತೂರಿನ ಬಳಿ ಬ್ರಿಟಿಷರೊಂದಿಗೆ ನಡೆದ ಕದನದಲ್ಲಿ ಹೈದರನು ವೀರಮರಣವನ್ನಪ್ಪಿದನು.
ಟಿಪ್ಪು ಸುಲ್ತಾನ್ (ಕ್ರಿ. ಶ. ೧೭೮೨-೧೭೯೯):-
ಹೈದರಾಲಿಯ ನಂತರ ಅಧಿಕಾರ ವಹಿಸಿಕೊಂಡ ಟಿಪ್ಪು ಸುಲ್ತಾನ್ 'ಮೈಸೂರು ಹುಲಿ' ಎಂದು ಖ್ಯಾತಿ ಪಡೆದಿದ್ದಾನೆ. ಇವನು ಕ್ರಿ. ಶ. ೧೭೫೩ ನವೆಂಬರ್ ೨೦ ರಂದು ದೇವನಹಳ್ಳಿಯಲ್ಲಿ ಜನಿಸಿದನು. ಎರಡನೇ ಆಂಗ್ಲೋ-ಮೈಸೂರು ಯುಧ್ಧದಲ್ಲಿ ಭಾಗವಹಿಸಿದ್ದ ಈತನು ತನ್ನ ತಂದೆಯನ್ನು ಕಳೆದುಕೊಂಡು, ತಂದೆಯ ಸ್ಥಾನಕ್ಕೇರಿ ಯುದ್ಧವನ್ನು ಮುಂದುವರೆಸಿದನು. ಕ್ರಿ. ಶ. ೧೭೮೩ ರಲ್ಲಿ ಬ್ರಿಟಿಷರನ್ನು ವಾಂಡಿವಾಷ್ ಕದನದಲ್ಲಿ ಸೋಲಿಸಿದನು. ನಂತರ ಕ್ರಿ. ಶ. ೧೭೮೪ ರಲ್ಲಿ ಬ್ರಿಟಿಷರು ಮತ್ತು ಟಿಪ್ಪು ನಡುವೆ ಮಂಗಳೂರು ಒಪ್ಪಂದವಾಗಿ ಯುದ್ಧ ಕೊನೆಗೊಂಡಿತು. ಕ್ರಿ. ಶ. ೧೭೮೬ ರಲ್ಲಿ ಮರಾಠರೊಂದಿಗೆ ನಡೆದ ಯುದ್ಧವನ್ನು ಯಶಸ್ವಿಯಾಗಿ ಎದುರಿಸಿದನು.
ಆ ನಂತರ ಟಿಪ್ಪುವು ಬ್ರಿಟಿಷರ ಮಿತ್ರ ರಾಜ್ಯವಾದ ತಿರುವಾಂಕೂರ್‌ನ ಮೇಲೆ ದಾಳಿ ಮಾಡಿದುದು ಮೂರನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ನಾಂದಿಯಾಯಿತು. ೧೭೯೧ ರಲ್ಲಿ ಬ್ರಿಟಿಷ್ ಗವರ್ನರ್ ಲಾರ್ಡ್ ಕಾರ್ನ್ ವಾಲಿಸನು ಮರಾಠ ಹಾಗೂ ಹೈದರಾಬಾದಿನ ನಿಜಾಮರೊಡನೆ ಟಿಪ್ಪುವನ್ನು ಸೋಲಿಸಲು ಶ್ರೀರಂಗಪಟ್ಟಣದವರೆಗೆ ಬಂದು, ಟಿಪ್ಪುವಿನಿಂದ ಸೋಲುಂಡನು. ೧೭೯೨ ರಲ್ಲಿ ಕಾರ್ನವಾಲಿಸನು ಬೊಂಬಾಯಿಯಿಂದ ದೊಡ್ಡ ಸೈನ್ಯದೊಡನೆ ಟಿಪ್ಪುವನ್ನು ಸೋಲಿಸಲು ಬಂದನು. ಇಷ್ಟು ದೊಡ್ಡ ಸೈನ್ಯವನ್ನು ಸೋಲಿಸಲು ಟಿಪ್ಪುವಿಗೆ ಸಾಧ್ಯವಾಗದೆ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು. ಈ ಒಪ್ಪಂದದ ಪ್ರಕಾರ ಟಿಪ್ಪು ಶತ್ರುಗಳಿಗೆ ತನ್ನ ಅರ್ಧ ರಾಜ್ಯವನ್ನು ಹಾಗೂ ಯುದ್ಧದ ಖರ್ಚಿಗೆ ೩ ಕೋಟಿ ರೂ. ವನ್ನು ಕೊಡಬೇಕಾಯಿತು. ಹಣ ಪಾವತಿಯಾಗುವವರೆಗೂ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಯಿತು.
ಬ್ರಿಟಿಷರ ವಿರುದ್ಧ ಸದಾ ಹಗೆ ಕಾರುತ್ತಾ ಅವರನ್ನು ಹೇಗಾದರೂ ಮಾಡಿ ಭಾರತದಿಂದ ಓಡಿಸಬೇಕೆಂದು ಟಿಪ್ಪು ಕೆಲವು ವಿದೇಶಿಯರ ನೆರವು ಕೋರಿದನಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಕ್ರಿ. ಶ. ೧೭೯೮ ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡ ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿಯನ್ನು ಸೇರಲು ಟಿಪ್ಪು ನಿರಾಕರಿಸಿದನು. ಇದು ವೆಲ್ಲೆಸ್ಲಿಯನ್ನು ಕೆರಳಿಸಿತು. ಟಿಪ್ಪುವನ್ನು ಸೋಲಿಸಲು ಅವನು ಹ್ಯಾರಿಸ್ ನ ನಾಯಕತ್ವದಲ್ಲಿ ಪ್ರಬಲ ಸೈನ್ಯವನ್ನು ಕಳುಹಿಸಿದನು. ಇದೇ ನಾಲ್ಕನೇ ಆಂಗ್ಲೊ - ಮೈಸೂರು ಯುದ್ಧ. ಮಳವಳ್ಳಿ ಮತ್ತು ಸಿದ್ದೇಶ್ವರ ಕದನಗಳಲ್ಲಿ ಟಿಪ್ಪುವಿಗೆ ಸೋಲಾಗಿ ಅವನು ಶ್ರೀರಂಗಪಟ್ಟಣದ ಕೋಟೆ ಸೇರಿ ಯುದ್ಧ ಸಿದ್ಧತೆ ನಡೆಸತೊಡಗಿದನು. ಅಲ್ಲಿಗೂ ಮುತ್ತಿಗೆ ಹಾಕಿದ ಶತೃ ಸೈನ್ಯದೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪು ಕ್ರಿ. ಶ. ೧೭೯೯ರ ಮೇ ೪ ರಂದು ಶತೃಗಳಿಂದ ಹತನಾದನು.
ಮೈಸೂರು ಒಡೆಯರು :-
ಮೈಸೂರು ಒಡೆಯರು :-
ಮೈಸೂರು ಒಡೆಯರ ಆಳ್ವಿಕೆಯು ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಮೈಸೂರು ಒಡೆಯರ ಮೂಲ ಪುರುಷನು ಯದುರಾಯ (ವಿಜಯರಾಯ) ಮತ್ತು ಕೃಷ್ಣರಾಯ ಎಂಬ ಸಹೋದರರು. ಮೈಸೂರಿನ ಒಡೆಯರು ಯದುವಂಶದವರು. ಕ್ರಿ. ಶ. ೧೪೦೦ ರಲ್ಲಿ ಸಿಂಹಾಸನವೇರಿ ಯದುರಾಯ ೨೩ ವರ್ಷಗಳ ಕಾಲ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯವಾಳಿದನು. ಇವನು ಅನೇಕ ಪಾಳೆಯಗಾರರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದನು. ಆನಂತರ ಇವನ ಮಗ ಬೆಟ್ಟದ ಚಾಮರಾಜ ಒಡೆಯರ (ಕ್ರಿ. ಶ. ೧೪೨೩-೫೯) ನು ೩೬ ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಮುಂದೆ ತಿಮ್ಮರಾಜ ಒಡೆಯ(ಕ್ರಿ. ಶ. ೧೪೫೯-೭೮), ಒಂದನೇ ಚಾಮರಾಜ ಒಡೆಯರು (ಕ್ರಿ. ಶ. ೧೪೭೮-೧೫೧೩), ಎರಡನೇ ಬೆಟ್ಟದ ಚಾಮರಾಜ ಒಡೆಯರು (ಕ್ರಿ. ಶ. ೧೫೧೩-೫೩), ಎರಡನೇ ತಿಮ್ಮರಾಜ ಒಡೆಯರು (ಕ್ರಿ. ಶ. ೧೫೫೩-೭೨), ಬೋಳ ಚಾಮರಾಜ ಒಡೆಯರು (ಕ್ರಿ. ಶ. ೧೫೭೨-೭೬), ಮೂರನೇ ಚಾಮರಾಜ ಒಡೆಯರು (ಕ್ರಿ. ಶ. ೧೫೭೬-೭೮) ರಾಜ್ಯಭಾರ ಮಾಡಿದರು.
ಕ್ರಿ.ಶ. ೧೫೭೮ ರಲ್ಲಿ ಸಿಂಹಾಸನವೇರಿದ, ಒಂದನೇ ರಾಜ ಒಡೆಯರು (ಕ್ರಿ. ಶ. ೧೫೭೮-೧೬೧೭) ಅನೇಕ ಪಾಳೆಯಗಾರರನ್ನು ಹತ್ತಿಕ್ಕಿದರಲ್ಲದೆ, ವಿಜಯನಗರ ಅರಸರಿಗೆ ಮೈಸೂರು ಅರಸರು ನೀಡುತ್ತಿದ್ದ ಕಪ್ಪವನ್ನು ನಿಲ್ಲಿಸಿ ಸ್ವತಂತ್ರರಾದರು. ಮೈಸೂರು ಸಂಸ್ಥಾನದಲ್ಲಿ ನವರಾತ್ರಿ ಉತ್ಸವದ ಆಚರಣೆಯನ್ನು ಪ್ರಾರಂಭಿಸಿದವರು ಇವರೆ. ನಂತರ ರಾಜ ಒಡೆಯರ ಮೊಮ್ಮಗ ಚಾಮರಾಜ ಒಡೆಯರು (ಕ್ರಿ. ಶ. ೧೬೧೭-೩೭) ತಮ್ಮ ೧೪ನೇ ವಯಸ್ಸಿನಲ್ಲಿ ಸಿಂಹಾಸನವೇರಿದನು. ಹಾಗಾಗಿ ಆಡಳಿತದ ಜವಾಬ್ದಾರಿಯನ್ನು ಹೊತ್ತಿದ್ದ ದಳವಾಯಿ ಬೆಟ್ಟದ ಅರಸು ತಾನೇ ಸಿಂಹಾಸನವೇರಿಸಲು ಪ್ರಯತ್ನಿಸಿದನು. ಇದು ಚಾಮರಾಜ ಒಡೆಯರಿಗೆ ಗೊತ್ತಾಗಿ ಆತನ ಕಣ್ಣುಗಳನ್ನು ಕೀಳಿಸಿ ಬಂಧನದಲ್ಲಿಟ್ಟರು. ಚಾಮರಾಜ ಒಡೆಯರ ನಂತರ ಸಿಂಹಾಸನವೇರಿದ ಅವರ ಚಿಕ್ಕಪ್ಪ ಎರಡನೇ ರಾಜ ಒಡೆಯರು ಕ್ರಿ. ಶ. ೧೬೩೮ ರಲ್ಲಿ ಕೊಲೆಯಾದರು. ಹಾಗಾಗಿ ಒಂದನೇ ರಾಜ ಒಡೆಯರ ಸಹೋದರನ ಮಗ ಕಂಠೀರವ ನರಸರಾಜ ಒಡೆಯರು ಕ್ರಿ. ಶ. ೧೬೩೮ ರಲ್ಲಿ ಕೊಲೆಯಾದರು. ಹಾಗಾಗಿ ಒಂದನೇಯ ರಾಜ ಒಡೆಯರ ಸಹೋದರನ ಮಗ ಕಂಠೀರವ ನರಸರಾಜ ಒಡೆಯರು (ಕ್ರಿ. ಶ. ೧೬೩೮-೫೯) ಸಿಂಹಾಸನವೇರಿದರು. ಅತ್ಯಂತ ಪರಾಕ್ರಮಿಯಾಗಿದ್ದ ಇವರು ಶ್ರೀರಂಗಪಟ್ಟಣಕ್ಕೆ ದಾಳಿಯಿಟ್ಟಿದ್ದ ಬಹಮನಿ ಸುಲ್ತಾನನ ಸೇನಾನಿ ರಣದುಲ್ಲಾಖಾನನ್ನು ಸೋಲಿಸಿ ಓಡಿಸಿದರು. ಇವರು 'ಕಂಠೀರವಪಣ' ಎಂಬ ನಾಣ್ಯವನ್ನು ಹೊರ ತಂದರು. ತನಗೆ ಮಕ್ಕಳಿಲ್ಲವಾದ್ದರಿಂದ ಇವರು ಬೋಳ ಚಾಮರಾಜ ಒಡೆಯರ ಮೊಮ್ಮಗ ದೊಡ್ಡ ದೇವರಾಜ ಒಡೆಯರ್ (ಕ್ರಿ. ಶ. ೧೬೫೯-೭೨)ಗೆ ಪಟ್ಟ ಕಟ್ಟಿದರು. ದೊಡ್ಡ ದೇವರಾಜ ಒಡೆಯರ್ ರವರು ಶ್ರೀರಂಗಪಟ್ಟಣಕ್ಕೆ ದಾಳಿ ಮಾಡಿದ ಕೆಳದಿಯ ಶಿವಪ್ಪನಾಯಕನನ್ನು ಸೋಲಿಸಿದರಲ್ಲದೆ ಅನಂತರ ದಾಳಿ ಮಾಡಿದ ಬಿಜಾಪುರದ ರಣದುಲ್ಲಾಖಾನನ್ನು ಮತ್ತು ಮಧುರೆಯ ನಾಯಕನನ್ನು ಸೋಲಿಸಿದರು. ಇವರಿಗೆ 'ಹಿಂದೂರಾಯಸುತ್ರಾಣ', 'ಪರರಾಯ ಭಯಂಕರ' ಮುಂತಾದ ಬಿರುದುಗಳಿದ್ದವು.
ದೊಡ್ಡ ದೇವರಾಜ ಒಡೆಯರ್ ನಂತರ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ್ (ಕ್ರಿ. ಶ. ೧೬೭೨-೧೭೦೪) ಮರಾಠರಿಂದ ಮತ್ತು ದೆಹಲಿಯ ಔರಂಗಜೇಬನಿಂದ ರಾಜ್ಯ ರಕ್ಷಣೆ ಮಾಡಿದರಲ್ಲದೆ, ಆನಂತರ ಔರಂಗಜೇಬನೊಂದಿಗೆ ಸ್ನೇಹ ಮಾಡಿಕೊಂಡರು. ಔರಂಗಜೇಬನು ಇವರಿಗೆ 'ರಾಜ ಜಗದೇವ' ಎಂಬ ಬಿರುದು ನೀಡಿದ್ದನು. ಚಿಕ್ಕದೇವರಾಜ ಒಡೆಯರ್ ಹೈದರಾಲಿಯ ಸಹಾಯದಿಂದ ದೇವನಹಳ್ಳಿಯನ್ನು ವಶಪಡಿಸಿಕೊಂಡರು. ಚಿಕ್ಕದೇವರಾಯರ ನಂತರ ಅವರ ಮಗ ಮೂಗನಾಗಿದ್ದ ಎರಡನೇ ಕಂಠೀರವ ನರಸರಾಜ ಒಡೆಯರ್ (ಕ್ರಿ. ಶ. ೧೭೦೪-೧೩) ಪ್ರಧಾನಿ ತಿರುಮಲಯ್ಯ ಮತ್ತು ದಳವಾಯಿ ಕಾಂತರಾಜಯ್ಯನವರ ಮೂಲಕ ರಾಜ್ಯಭಾರ ನಡೆಸಿದರು. ನಂತರ ದೊಡ್ಡ ಕೃಷ್ಣರಾಜ ಒಡೆಯರ್ (ಕ್ರಿ. ಶ ೧೭೧೩-೩೧)ಸಿಂಹಾಸನವೇರಿದರೆ ಆನಂತರ ಅವರ ದತ್ತು ಪುತ್ರ ಅಂಕನಹಳ್ಳಿಯ ಚಾಮರಾಜ (೧೭೩೨-೩೪)ಸಿಂಹಾಸನವೇರಿದರು. ಇವರ ಕಾಲದಲ್ಲಿ ದಳವಾಯಿ ದೇವರಾಜಯ್ಯ ಮತ್ತು ನಂಜರಾಜಯ್ಯರ ಕೀಟಲೆ ವಿಪರೀತವಾಗಿತ್ತು. ಅನಂತರ ಕ್ರಿ. ಶ. ೧೭೩೪ ರಲ್ಲಿ ಎರಡನೇ ಕೃಷ್ಣರಾಜ ಸಿಂಹಾಸನವೇರಿದರು. ಕ್ರಿ. ಶ. ೧೭೫೮ ರಲ್ಲಿ ಹೈದರಾಲಿ ಇವರ ದಳವಾಯಿಯಾಗಿ ನೇಮಕಗೊಂಡರು. ಕ್ರಿ. ಶ. ೧೭೬೬ ರಲ್ಲಿ ಸಿಂಹಾಸನವೇರಿದ ನಂಜರಾಜರ ಕಾಲದಲ್ಲಿ ಹೈದರಾಲಿ ಆಡಳಿತ ವ್ಯವಹಾರಗಳನ್ನು ಕೈಗೆತ್ತಿಕೊಂಡನು. ಹೀಗೆ ಹೈದರಾಲಿ ೨೦ ವರ್ಷ ಹಾಗೂ ಟಿಪ್ಪು ೧೭ ವರ್ಷಗಳ ಕಾಲ ಮೈಸೂರನ್ನು ಆಳಿದರು. ಈ ಒಂದು ಅವಧಿಯಲ್ಲಿ ಎರಡನೇ ಕೃಷ್ಣರಾಜ, ನಂಜರಾಜ, ಎಂಟನೇ ಚಾಮರಾಜ ಹಾಗೂ ಒಂಬತ್ತನೇ ಚಾಮರಾಜ ಒಡೆಯರ್ ಮುಂತಾದವರು ಪದಚ್ಯುತರಾದರು.
Wednesday, 28 March 2018
ಚಿತ್ರದುರ್ಗದ ಪಾಳೆಯಗಾರರು
ಚಿತ್ರದುರ್ಗದ ಪಾಳೆಯಗಾರರು:-
ಚಿತ್ರದುರ್ಗದ ಪಾಳೆಪಟ್ಟಿನ ಸ್ಥಾಪಕ ತಿಮ್ಮಣ್ಣನಾಯಕ ಎಂಬುವನು. ಇವನು ತಿರುಪತಿಯ ಮೇದಕೇರಿಯಿಂದ ಬಂದವನು ಎಂದು ನಂಬಲಾಗಿದೆ. ಹೀಗಾಗಿ ಚಿತ್ರದುರ್ಗದ ಅರಸರಿಗೆ ಮದಕರಿನಾಯಕರೆಂಬ ಹೆಸರು ಬಂತೆಂದು ಪ್ರತೀತಿ. ತಿಮ್ಮಣ್ಣನಾಯಕನು ಸುತ್ತಮುತ್ತಲಿನ ನಾಯಕರನ್ನು ಸೋಲಿಸಿ ಆಳುತಿದ್ದು ನಂತರ ವಿಜಯನಗರದ ಅರಸ ಸಾಳುವ ನರಸಿಂಹನ ಕಾಲದಲ್ಲಿ ವಿಜಯನಗರದ ಸಾಮಂತನಾದನು. ಚಿತ್ರದುರ್ಗದ ಕೋಟೆಯನ್ನು ನಿರ್ಮಿಸಿ ಕ್ರಿ. ಶ. ೧೪೯೫ ರಲ್ಲಿ ಅಲ್ಲಿಯ ನಾಯಕನಾಗಿ ಆಳಲಾರಂಬಿಸಿದನು. ನಂತರ ಇವನ ಮಗ ಓಬಣ್ಣನಾಯಕ( ಕ್ರಿ. ಶ. ೧೫೧೦-೨೫) ಅಧಿಕಾರಕ್ಕೆ ಬಂದನು. ಅನಂತರದ ಕಸ್ತೂರಿ ರಂಗಪ್ಪನಾಯಕ (ಕ್ರಿ. ಶ.೧೫೨೫-೭೪) ಎರಡನೇ ಮದಕರಿನಾಯಕ, ಓಬಣ್ಣನಾಯಕ, ಮೂರನೇ ಮದಕರಿನಾಯಕ ಮುಂತಾದವರು ಅಧಿಕಾರ ನಡೆಸಿದರು. ೧೭೫೫ ರಲ್ಲಿ ಸಿಂಹಾಸನವೇರಿದ ಐದನೇ ಮದಕರಿನಾಯಕ (ಕ್ರಿ. ಶ. ೧೭೫೫-೧೭೭೯) ಚಿತ್ರದುರ್ಗದ ಪಾಳೆಯಗಾರಲ್ಲೆಲ್ಲಾ ಅತೀ ಶ್ರೇಷ್ಠನಾದವನು. ಈತನು ಸಿಂಹಾಸನವೇರಿದಾಗ ಹನ್ನೆರಡು ವರ್ಷವಷ್ಟೇ ವಯಸ್ಸಾಗಿತ್ತು. ಶತೃಗಳ ಕಾಟ ವಿಪರೀತವಾಗಿತ್ತು. ಎಲ್ಲಾ ಶತೃಗಳ ಸಮರ್ಥವಾಗಿ ಎದುರಿಸಿದನು. ಪ್ರಾಪ್ತ ವಯಸ್ಕನಾದ ಮೇಲೆ ಇವನು ರಾಯದುರ್ಗದ ಕೃಷ್ಣಪ್ಪ ಹಾಗೂ ಅವನ ಶತೃ ಸೈನ್ಯವನ್ನು ಸೋಲಿಸಿದನು. ಇವನನ್ನು ಸೋಲಿಸಲು ಬಂದ ಹೈದರಾಲಿಯೊಡನೆ ಎರಡು ಲಕ್ಷ ವರಹ ಪೊಗದಿ ನೀಡಲು ಸಮ್ಮತಿಸಿ ಸ್ನೇಹ ಬೆಳೆಸಿದನು. ಹೈದರಾಲಿಯನ್ನು ಸೋಲಿಸಲು ಬಂದಿದ್ದ ಮರಾಠರನ್ನು ಮದಕರಿನಾಯಕನು ಸೋಲಿಸಿದನು. ಸ್ನೇಹದಿಂದಿದ್ದ ಹೈದರಾಲಿಯೊಡನೆ ಇವನ ಸ್ನೇಹ ಹಳಸಿತು. ಹಾಗಾಗಿ ಹೈದರಾಲಿಯು ಮದಕರಿನಾಯಕನ ಮೇಲೆ ಸತತವಾಗಿ ಹಗೆ ಸಾಧಿಸಿದನು. ಮದಕರಿನಾಯಕನನ್ನು ಸೋಲಿಸಲು ಮಾಡಿದ ಅವನ ಪ್ರಯತ್ನಗಳಿಗೆ ಯಶ ಸಿಕ್ಕಿರಲಿಲ್ಲ. ನಂತರ ನಡೆದ ಯುದ್ಧದಲ್ಲಿ ಮದಕರಿನಾಯಕನ ಸೈನಿಕರ ಪಿತೂರಿಯಿಂದ ಕ್ರಿ. ಶ. ೧೭೭೯ರಲ್ಲಿ ಹೈದರಾಲಿಗೆ ಸೋತು ಸೆರೆ ಸಿಕ್ಕ ಅವನು ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಕಾಲವಾದನು.
ಕೆಳದಿಯ ಅರಸರು:-
ಕೆಳದಿಯ ಅರಸರು :-
ವಿಜಯನಗರದ ಅರಸರ ಸಾಮಂತರಾಗಿದ್ದ ಇಕ್ಕೇರಿಯ ನಾಯಕರು ಆನಂತರ ಸ್ವತಂತ್ರರಾಗಿ ರಾಜ್ಯಭಾರ ಮಾಡಿದರು. ಬಸವಪ್ಪ ಮತ್ತು ಬಸವ್ವ ದಂಪತಿಗಳ ಪುತ್ರರಾದ ಚೌಡಪ್ಪ ಮತ್ತು ಭದ್ರಪ್ಪ ಎಂಬುವವರು ಕೆಳದಿ ಸಂಸ್ಥಾನದ ಸ್ಥಾಪಕರು. ಚೌಡಪ್ಪನಾಯಕ(ಕ್ರಿ. ಶ. ೧೪೯೯-೧೫೧೪)ನ ಕೀರ್ತಿಯಿಂದಾಗಿ ವಿಜಯನಗರದ ಕೃಷ್ಣದೇವರಾಯನು ಇವನೊಡನೆ ಸ್ನೇಹ ಬೆಳೆಸಿದನು. ವಿಜಯನಗರದ ಮೇಲೆ ದಾಳಿ ಮಾಡಿದ ಬೇಡರನ್ನು ಹಾಗೂ ಮುಸ್ಲಿಂರನ್ನು ಹಿಮ್ಮೆಟ್ಟಿಸಿದ ಚೌಡಪ್ಪನಾಯಕ ಹಾಗೂ ಭದ್ರಪ್ಪನಾಯಕನಿಗೆ ಕೃಷ್ಣದೇವರಾಯನು ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಎಲಿಗಳಲೆ, ಮೋದುರು, ಕಲಿಸ, ಲಾತವಾಡಿಗಳನ್ನು ನೀಡಿ ಅವನ ಆಪ್ತ ಸಾಮಂತರಾಗಿರುವಂತೆ ನೋಡಿಕೊಂಡನು. ಚೌಡಪ್ಪನಾಯಕನ ನಂತರ ಬಂದ ಅವನ ಮಗ ಸದಾಶಿವ ನಾಯಕ (ಕ್ರಿ. ಶ. ೧೫೧೪-೪೬)ನು ರಾಜಧಾನಿಯನ್ನು ಕೆಳದಿಯಿಂದ ಇಕ್ಕೇರಿಗೆ ಬದಲಾಯಿಸಿದನು. ಆನಂತರ ಬಂದ ದೊಡ್ಡ ಸಂಕಣ್ಣನಾಯಕ(ಕ್ರಿ. ಶ. ೧೫೪೬-೫೭)ನು ಉಡುಗಣೆಯ ಪಾಳೆಯಗಾರನನ್ನು ಸೋಲಿಸಿದನು. ಇವನ ತಮ್ಮ ಚಿಕ್ಕ ಸಂಕಣ್ಣನಾಯಕ( ಕ್ರಿ. ಶ. ೧೫೫೯-೧೫೭೧)ನು ೧೫೬೫ರ ತಾಳಿಕೋಟೆ ಕದನದಲ್ಲಿ ವಿಜಯನಗರದ ಪರವಾಗಿ ಹೋರಾಡಿದನು. ಈತನನ್ನು ಕೊಲೆ ಮಾಡಿ ಅವನ ಅಣ್ಣನ ಮಗ ರಾಮರಾಯ (ಕ್ರಿ. ಶ. ೧೫೭೦-೧೫೮೨) ರವರೆಗೆ ಅಸಮರ್ಪಕ ಆಡಳಿತ ನೀಡಿದನು.
ಕ್ರಿ.ಶ. ೧೫೮೨ ರಲ್ಲಿ ಸಿಂಹಾಸನವೇರಿದ ವೆಂಕಟಪ್ಪನಾಯಕ (ಕ್ರಿ. ಶ. ೧೫೮೨-೧೬೨೯) ವಿಜಯನಗರದ ಸಾಮಂತನಾಗಿರದೆ ಸ್ವತಂತ್ರನಾದನು. ಇವನ ಕಾಲದಲ್ಲಿ ಕೆಳದಿ ಸಂಸ್ಥಾನ ಸಂಪದ್ಭರಿತವಾಯಿತು. ಇವನ ಕಾಲದಲ್ಲಿ ಕ್ರಿ. ಶ. ೧೬೨೩ ರಲ್ಲಿ ಇಟಲಿಯ ಪ್ರವಾಸಿ ಪೀಟ್ರೊ ಡೆಲ್ಲಾವಲ್ಲೆ ಇಕ್ಕೇರಿಗೆ ಭೇಟಿ ನೀಡಿದ್ದನು. ವೆಂಕಟಪ್ಪನಾಯಕನ ನಂತರ ಅವನ ಮೊಮ್ಮಗ ವೀರಭದ್ರನಾಯಕ (ಕ್ರಿ. ಶ. ೧೬೨೯-೧೬೪೫) ಸಿಂಹಾಸನವೇರಿದನು. ಬಾಣಾವರ ಮತ್ತು ತರೀಕೆರೆಯ ಪಾಳೆಯಗಾರರು ಬಿಜಾಪುರದ ಆದಿಲ್ ಶಾಹಿಗಳೊಂದಿಗೆ ಸೇರಿಕೊಂಡು ಕಾಟ ನೀಡಲಾರಂಭಿಸಿದ ಕಾರಣ ಇವನು ಬಿಜಾಪುರದ ಸುಲ್ತಾನನಿಗೆ ಕಪ್ಪಕಾಣಿಕೆ ನೀಡಿ ಅವನ ಸಾಮಂತನಾದನು. ತನ್ನ ರಾಣಿಯ ಸಾವಿನಿಂದ ಜಿಗುಪ್ಸೆ ಹೊಂದಿ ರಾಜ್ಯಭಾರದತ್ತ ಈತ ಅಷ್ಟಾಗಿ ಗಮನ ನೀಡಿದ್ದರಿಂದ ಶಿವಪ್ಪನಾಯಕ (ಕ್ರಿ. ಶ. ೧೬೪೫-೧೬೬೦)ನಿಗೆ ಪಟ್ಟಾಭಿಷೇಕವಾಯಿತು. ಇವನು ಕೆಳದಿ ಅರಸರಲ್ಲೆಲ್ಲಾ ಪ್ರಖ್ಯಾತನಾದನು. ಇವನ ಕಾಲದಲ್ಲಿ ಕೆಳದಿಯ ಖ್ಯಾತಿ ಎಲ್ಲೆಡೆ ಹಬ್ಬಿತು. ಇವನು ಅನೇಕ ಶತೃಗಳನ್ನು ಸದೆಬಡಿದನು. ಮೈಸೂರು ದೊರೆ ದೇವರಾಜ ಒಡೆಯನ ಸೈನ್ಯವನ್ನು ಬೇಲೂರಿನಲ್ಲಿ ಸೋಲಿಸಿದನು. ಅತ್ಯುತ್ತಮ ಆಡಳಿತ ನೀಡಿದ ಈತ ಕೃಷಿ ಭೂಮಿಗೆ ಅದರ ಉತ್ಪನ್ನದ ಆಧಾರದ ಮೇಲೆ ಕಂದಾಯ ನಿಗದಿ ಮಾಡಿದ್ದನು. ಈ ಪದ್ಧತಿ ಶಿವಪ್ಪನಾಯಕನ ಶಿಸ್ತು ಎಂದು ಪ್ರಸಿದ್ಧವಾಗಿತ್ತು. ಶಿವಪ್ಪನಾಯಕನ ನಂತರ ಇವನ ಎರಡನೇ ತಮ್ಮ ವೆಂಕಟಪ್ಪನಾಯಕ( ಕ್ರಿ. ಶ. ೧೬೬೦-೬೧) ಮತ್ತು ಮಗ ಭದ್ರಪ್ಪ( ಕ್ರಿ. ಶ. ೧೬೬೧-೭೧) ಕೊಲೆಯಾಗಲಾಗಿ ಇವನ ಪತ್ನಿ ಚನ್ನಮ್ಮಾಜಿ (ಕ್ರಿ. ಶ. ೧೬೭೧-೯೭) ಅಧಿಕಾರ ಸೂತ್ರ ಹಿಡಿದು ಸಮರ್ಥವಾಗಿ ರಾಜ್ಯ ರಕ್ಷಣೆ ಮಾಡಿದಳು. ಔರಂಗಜೇಬನ ದಾಳಿಯಿಂದ ಓಡಿ ಬಂದಿದ್ದ ಮರಾಠರ ರಾಜರಾಮನಿಗೆ ರಕ್ಷಣೆ ನೀಡಿ, ತನ್ನ ಮೇಲೂ ದಾಳಿ ಮಾಡಿದ್ದ ಔರಂಗಜೇಬನನ್ನು ಹಿಮ್ಮೆಟ್ಟಿಸಿದಳು. ಬಸವಭೂಪಾಲ(ಬಸಪ್ಪನಾಯಕ) ಎಂಬಾತನನ್ನು ದತ್ತು ತೆಗೆದುಕೊಂಡು ಆಡಳಿತ ತರಬೇತಿ ನೀಡಿದಳು. ಬಸಪ್ಪನಾಯಕ ಅಪ್ರತಿಮ ವೀರ ಹಾಗೂ ವಿದ್ವಾಂಸ. ಇವನ ನಂತರ ಎರಡನೇ ಸೋಮಶೇಖರನಾಯಕ (ಕ್ರಿ. ಶ. ೧೭೧೪-೩೯) ಸಿಂಹಾಸನವೇರಿದನು. ಸೋಮಶೇಖರನಾಯಕನ ನಂತರ ಸಿಂಹಾಸನವೇರಿದ ಎರಡನೇ ಬಸವಪ್ಪ (ಕ್ರಿ. ಶ. ೧೭೩೯-೫೪)ನು ಚಿತ್ರದುರ್ಗ ಮದಕರಿನಾಯಕ
ಮಾಯಕೊಂಡ ಎಂಬ ಯುಧ್ಧದಲ್ಲಿ ಹತನಾದನು.
ಹೀಗಾಗಿ ಅವನ ದತ್ತು ಪುತ್ರ ಚನ್ನಬಸಪ್ಪ (ಕ್ರಿ. ಶ. ೧೭೫೪-೫೭) ಸಿಂಹಾಸನವೇರಿದನು. ನಂತರ ಸಿಂಹಾಸನವೇರಿದ ಮೂರನೇ ಸೋಮಶೇಖರನಾಯಕ ಕ್ರಿ. ಶ. ೧೭೬೩ ರಲ್ಲಿ ಚಿತ್ರದುರ್ಗದ ಪಾಳೆಯಗಾರರೊಂದಿಗೆ ಹೈದರಾಲಿಯು ಬಿದನೂರನ್ನು ಮುತ್ತಿದಾಗ ನಡೆದ ಯುದ್ಧದಲ್ಲಿ ಸೆರೆ ಸಿಕ್ಕನು. ಇದರಿಂದಾಗಿ ಕೆಳದಿಯ ರಾಜ್ಯ ಮೈಸೂರಿನಲ್ಲಿ ವಿಲೀನವಾಯಿತು.
ಕೆಳದಿಯ ಅರಸರು ವೀರಶೈವವಾದರೂ,
ಧಾರ್ಮಿಕ ಸಹಿಷ್ಣುಗಳಾಗಿದ್ದು, ಎಲ್ಲಾ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಂಡರು. ಹಲವಾರು ದೇವಾಲಯಗಳನ್ನು ನಿರ್ಮಿಸಿದರು.
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...