Thursday, 29 March 2018

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್

ಹೈದರಾಲಿ (ಕ್ರಿ. ಶ. ೧೭೬೧-೮೨):-
             ಹೈದರಾಲಿಯು ಕ್ರಿ. ಶ. ೧೭೨೧ ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದನು. ಸೈನಿಕ ತರಬೇತಿ ಪಡೆದಿದ್ದ ಈತ ಮೈಸೂರು ಸೈನ್ಯವನ್ನು ಸೇರಿಕೊಂಡು, ಕ್ರಿ. ಶ. ೧೭೪೯ ರಲ್ಲಿ ನಡೆದ ದೇವನಹಳ್ಳಿಯ ಮುತ್ತಿಗೆಯಲ್ಲಿ ಅಪ್ರತಿಮ ಸಾಹಸ ತೋರಿ ಅಂದಿನ ದಳವಾಯಿ ನಂಜರಾಜಯ್ಯನ ಗಮನ ಸೆಳೆದನು. ನಂಜರಾಜಯ್ಯನು ಇವನನ್ನು ತುಕಡಿಯೊಂದರ ನಾಯಕನನ್ನಾಗಿ ನೇಮಿಸಿದನು. ಕ್ರಿ. ಶ. ೧೭೫೫ ರಲ್ಲಿ ಹೈದರನು ದಿಂಡಿಗಲ್ಲಿನ ಪೌಜುದಾರನಾಗಿ ನೇಮಕವಾದನು. ದಿಂಡಿಗಲ್ಲಿನಲ್ಲಿದ್ದಾಗ ಮೈಸೂರನ್ನು ಮುತ್ತಿದ್ದ ಮರಾಠರನ್ನು ಸೋಲಿಸಿ ಓಡಿಸಿದನು. ನಂಜರಾಜಯ್ಯನು ತನ್ನ ಸೈನಿಕರಿಗೆ ಸಂಬಳ ನೀಡಲು ಹಣ ಇಲ್ಲದಾಗ, ಅದನ್ನು ನೀಡಿದ ಹೈದರನಿಗೆ ಕೆಲವು ತಾಲ್ಲೂಕುಗಳನ್ನು ಬಿಟ್ಟು ಕೊಟ್ಟನು. ಅಸಮರ್ಥನಾಗಿದ್ದ ನಂಜರಾಜನನ್ನು ಕೆಳಗಿಳಿಸಿ ಅವನ ತಮ್ಮ ಬೆಟ್ಟದ ಚಾಮರಾಜ ಒಡೆಯರನ್ನು ಕ್ರಿ. ಶ. ೧೭೭೦ ರಲ್ಲಿ ಸಿಂಹಾಸನವೇರಿದನು. ಇಲ್ಲಿಗೆ ದಳವಾಯಿಗಳ ಆಳ್ವಿಕೆ ಕೊನೆಗೊಂಡು, ಹೈದರನು ಪ್ರಬಲನಾಗುತ್ತಾ ಹೋದನು. ತನ್ನನ್ನು ವಿರೋಧಿಸಿದ ದಿವಾನ ಖಂಡೇರಾಯನನ್ನು ಹೈದರನು ಬಂಧಿಸಿದನು. ಕ್ರಿ. ಶ. ೧೭೭೬ ರಲ್ಲಿ ಬೆಟ್ಟದ ಚಾಮರಾಜ ಒಡೆಯರ್ ಕೊಲೆಯಾಗಲಾಗಿ, ಖಾಸಾ ಚಾಮರಾಜ (ಕ್ರಿ. ಶ. ೧೭೭೬-೯೬)ರನ್ನು ಪಟ್ಟಕ್ಕೆ ತಂದ ಹೈದರನು ಇವರೆಲ್ಲಾ ಅಸಮರ್ಥರಾದ ಕಾರಣ, ದಳವಾಯಿ ನಂಜರಾಜನನ್ನು ಮಂತ್ರಿಯಾಗಿ ಮಾಡಿಕೊಂಡು ತಾನೇ ಸರ್ವಾಧಿಕಾರಿಯಾದನು.
            ರಾಜರನ್ನು ಗೌರವಿಸುತಿದ್ದ ಹೈದರನು ಬೆಂಗಳೂರು, ಶ್ರೀರಂಗಪಟ್ಟಣದಲ್ಲಿ ಅರಮನೆಗಳನ್ನು ನಿರ್ಮಿಸಿದನು. ಚಿಕ್ಕಬಳ್ಳಾಪುರ, ಪೆನುಗೊಂಡೆ ಮುಂತಾದವುಗಳನ್ನು ಗೆದ್ದು ರಾಜ್ಯ ವಿಸ್ತರಿಸಿದಲ್ಲದೇ ಸಿರಾಕೋಟೆ ವಶಪಡಿಸಿಕೊಂಡನು. ಕ್ರಿ. ಶ. ೧೭೬೩ ರಲ್ಲಿ ಇಕ್ಕೇರಿ ಪ್ರಾಂತವನ್ನು ಗೆದ್ದುಕೊಂಡನು. ಮೂರು ಬಾರಿ ದಾಳಿ ಮಾಡಿದ ಮರಾಠರೊಂದಿಗೆ ಒಪ್ಪಂದ ಮಾಡಿಕೊಂಡನು. ಇವನ ಏಳಿಗೆಯನ್ನು ಸಹಿಸದಾದ ಬ್ರಿಟಿಷರ ನಡುವೆ ಕ್ರಿ. ಶ. ೧೭೬೭ ರಲ್ಲಿ  ಮೊದಲನೇ ಆಂಗ್ಲೊ ಮೈಸೂರು ಯುದ್ಧ ನಡೆಯಿತು. ಆಗ ಬ್ರಿಟಿಷರಿಗೆ ಸೋಲಾಯಿತು. ಕ್ರಿ. ಶ. ೧೭೬೯ ರಲ್ಲಿ ಹೈದರನು ಬ್ರಿಟಿಷರ ಕೆಲವೊಂದು ಪ್ರದೇಶಗಳನ್ನು ಗೆಲ್ಲುತ್ತಾ ಮದ್ರಾಸ್ ವರೆಗೂ ಹೋದನು . ಹಾಗಾಗಿ ಕ್ರಿ. ಶ. ೧೭೬೯ ರಲ್ಲಿ ಬ್ರಿಟಿಷರ ನಡುವೆ ನಡೆದ ಮದ್ರಾಸ್ ಒಪ್ಪಂದವಾಗಿ, ಬ್ರಿಟಿಷರು ಮತ್ತು ಹೈದರನು ಪರಸ್ಪರ ಆಕ್ರಮಣ ಮಾಡಬಾರದು ಹಾಗೂ ಪರಸ್ಪರಿಗೆ ಸಹಾಯ ಮಾಡಬೇಕು ಎಂಬ ತೀರ್ಮಾನವಾಯಿತು. ಹೀಗಿದ್ದೂ ಹೈದರನ ಮೇಲೆ ಮರಾಠರು ದಾಳಿ ಮಾಡಿದಾಗ ಬ್ರಿಟಿಷರು ಅವನಿಗೆ ಸಹಾಯ ಮಾಡಲಿಲ್ಲ. ಹಾಗಾಗಿ ಬ್ರಿಟಿಷರ ಮೇಲೆ ಮತ್ತೆ ದ್ವೇಷ ಬೆಳೆಯಿತು.
            ನಂತರ ಎರಡನೇ ಆಂಗ್ಲ-ಮೈಸೂರು ಯುದ್ಧ ಕ್ರಿ. ಶ. ೧೭೮೦ ರಲ್ಲಿ ಪ್ರಾರಂಭವಾಯಿತು. ಕ್ರಿ. ಶ. ೧೭೮೦ ರಲ್ಲಿ ದೇಶೀಯ ರಾಜರೆಲ್ಲಾ ಬ್ರಿಟಿಷರನ್ನು ಓಡಿಸಲು ಕೂಟವನ್ನು ರಚಸಿಕೊಂಡರಾದರೂ ಅದು ಫಲಪ್ರದವಾಗಲಿಲ್ಲ. ಕೂಟದಲ್ಲಿ ಶ ಸೇರಿದ್ದ ಹೈದರನು ಯುದ್ಧ ಮುಂದುವರೆಸಿ ಪಾಲಿಲೂರ್ ಬಳಿ ಬ್ರಿಟಿಷರನ್ನು ಸೋಲಿಸಿದನು. ೧೭೮೦ ಅಕ್ಟೋಬರ್ ನಲ್ಲಿ ಹೈದರನು ಅರ್ಕಾಟನ್ನು ವಶ ಪಡಿಸಿಕೊಂಡನು. ೧೭೮೨ ರ ಜುಲೈನಲ್ಲಿ ಪೋರ್ಟಿನೋವ ಬಳಿ ಬ್ರಿಟಿಷರು ಅವನನ್ನು ಸೋಲಿಸಿದರಲ್ಲದೆ, ಮತ್ತೊಮ್ಮೆ ಸೋಲಿಸಿದರು. ಅನಂತರ ಪ್ರಬಲ ಸೈನ್ಯದೊಂದಿಗೆ ಹೋದ ಹೈದರನು ಬ್ರಿಟಿಷರನ್ನು ತಂಜಾವೂರಿನ ಬಳಿ ಸೋಲಿಸಿದನು. ಆಮೇಲೆ ಕ್ರಿ. ಶ. ೧೭೮೨ರ ಡಿಸೆಂಬರ್ ೭ ರಂದು ಚಿತ್ತೂರಿನ ಬಳಿ ಬ್ರಿಟಿಷರೊಂದಿಗೆ ನಡೆದ ಕದನದಲ್ಲಿ ಹೈದರನು ವೀರಮರಣವನ್ನಪ್ಪಿದನು.

ಟಿಪ್ಪು ಸುಲ್ತಾನ್ (ಕ್ರಿ. ಶ. ೧೭೮೨-೧೭೯೯):-
             ಹೈದರಾಲಿಯ ನಂತರ ಅಧಿಕಾರ ವಹಿಸಿಕೊಂಡ ಟಿಪ್ಪು ಸುಲ್ತಾನ್ 'ಮೈಸೂರು ಹುಲಿ' ಎಂದು ಖ್ಯಾತಿ ಪಡೆದಿದ್ದಾನೆ. ಇವನು ಕ್ರಿ. ಶ. ೧೭೫೩ ನವೆಂಬರ್ ೨೦ ರಂದು ದೇವನಹಳ್ಳಿಯಲ್ಲಿ ಜನಿಸಿದನು. ಎರಡನೇ ಆಂಗ್ಲೋ-ಮೈಸೂರು ಯುಧ್ಧದಲ್ಲಿ ಭಾಗವಹಿಸಿದ್ದ ಈತನು ತನ್ನ ತಂದೆಯನ್ನು ಕಳೆದುಕೊಂಡು, ತಂದೆಯ ಸ್ಥಾನಕ್ಕೇರಿ ಯುದ್ಧವನ್ನು ಮುಂದುವರೆಸಿದನು. ಕ್ರಿ. ಶ. ೧೭೮೩ ರಲ್ಲಿ ಬ್ರಿಟಿಷರನ್ನು ವಾಂಡಿವಾಷ್ ಕದನದಲ್ಲಿ ಸೋಲಿಸಿದನು. ನಂತರ ಕ್ರಿ. ಶ. ೧೭೮೪ ರಲ್ಲಿ ಬ್ರಿಟಿಷರು ಮತ್ತು ಟಿಪ್ಪು ನಡುವೆ ಮಂಗಳೂರು ಒಪ್ಪಂದವಾಗಿ ಯುದ್ಧ ಕೊನೆಗೊಂಡಿತು. ಕ್ರಿ. ಶ. ೧೭೮೬ ರಲ್ಲಿ ಮರಾಠರೊಂದಿಗೆ ನಡೆದ ಯುದ್ಧವನ್ನು ಯಶಸ್ವಿಯಾಗಿ ಎದುರಿಸಿದನು.
             ಆ ನಂತರ ಟಿಪ್ಪುವು ಬ್ರಿಟಿಷರ ಮಿತ್ರ ರಾಜ್ಯವಾದ ತಿರುವಾಂಕೂರ್‌ನ ಮೇಲೆ ದಾಳಿ ಮಾಡಿದುದು ಮೂರನೇ ಆಂಗ್ಲೋ - ಮೈಸೂರು ಯುದ್ಧಕ್ಕೆ ನಾಂದಿಯಾಯಿತು. ೧೭೯೧ ರಲ್ಲಿ ಬ್ರಿಟಿಷ್ ಗವರ್ನರ್ ಲಾರ್ಡ್ ಕಾರ್ನ್ ವಾಲಿಸನು ಮರಾಠ ಹಾಗೂ ಹೈದರಾಬಾದಿನ ನಿಜಾಮರೊಡನೆ ಟಿಪ್ಪುವನ್ನು ಸೋಲಿಸಲು ಶ್ರೀರಂಗಪಟ್ಟಣದವರೆಗೆ ಬಂದು, ಟಿಪ್ಪುವಿನಿಂದ ಸೋಲುಂಡನು. ೧೭೯೨ ರಲ್ಲಿ ಕಾರ್ನವಾಲಿಸನು ಬೊಂಬಾಯಿಯಿಂದ ದೊಡ್ಡ ಸೈನ್ಯದೊಡನೆ ಟಿಪ್ಪುವನ್ನು ಸೋಲಿಸಲು ಬಂದನು. ಇಷ್ಟು ದೊಡ್ಡ ಸೈನ್ಯವನ್ನು ಸೋಲಿಸಲು ಟಿಪ್ಪುವಿಗೆ ಸಾಧ್ಯವಾಗದೆ ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ ಹಾಕಿದನು. ಈ ಒಪ್ಪಂದದ ಪ್ರಕಾರ ಟಿಪ್ಪು ಶತ್ರುಗಳಿಗೆ ತನ್ನ ಅರ್ಧ ರಾಜ್ಯವನ್ನು ಹಾಗೂ ಯುದ್ಧದ ಖರ್ಚಿಗೆ ೩ ಕೋಟಿ ರೂ. ವನ್ನು ಕೊಡಬೇಕಾಯಿತು. ಹಣ ಪಾವತಿಯಾಗುವವರೆಗೂ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಯಿತು.
               ಬ್ರಿಟಿಷರ ವಿರುದ್ಧ ಸದಾ ಹಗೆ ಕಾರುತ್ತಾ ಅವರನ್ನು ಹೇಗಾದರೂ ಮಾಡಿ ಭಾರತದಿಂದ ಓಡಿಸಬೇಕೆಂದು ಟಿಪ್ಪು ಕೆಲವು ವಿದೇಶಿಯರ ನೆರವು ಕೋರಿದನಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಕ್ರಿ. ಶ. ೧೭೯೮ ರಲ್ಲಿ ಭಾರತದ ಗವರ್ನರ್ ಜನರಲ್ ಆಗಿ ನೇಮಕಗೊಂಡ ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿಯನ್ನು ಸೇರಲು ಟಿಪ್ಪು ನಿರಾಕರಿಸಿದನು. ಇದು ವೆಲ್ಲೆಸ್ಲಿಯನ್ನು ಕೆರಳಿಸಿತು. ಟಿಪ್ಪುವನ್ನು ಸೋಲಿಸಲು ಅವನು ಹ್ಯಾರಿಸ್ ನ ನಾಯಕತ್ವದಲ್ಲಿ ಪ್ರಬಲ ಸೈನ್ಯವನ್ನು ಕಳುಹಿಸಿದನು. ಇದೇ ನಾಲ್ಕನೇ ಆಂಗ್ಲೊ - ಮೈಸೂರು  ಯುದ್ಧ. ಮಳವಳ್ಳಿ ಮತ್ತು ಸಿದ್ದೇಶ್ವರ ಕದನಗಳಲ್ಲಿ ಟಿಪ್ಪುವಿಗೆ ಸೋಲಾಗಿ ಅವನು ಶ್ರೀರಂಗಪಟ್ಟಣದ ಕೋಟೆ ಸೇರಿ ಯುದ್ಧ ಸಿದ್ಧತೆ ನಡೆಸತೊಡಗಿದನು. ಅಲ್ಲಿಗೂ ಮುತ್ತಿಗೆ ಹಾಕಿದ ಶತೃ ಸೈನ್ಯದೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪು ಕ್ರಿ. ಶ. ೧೭೯೯ರ ಮೇ ೪ ರಂದು ಶತೃಗಳಿಂದ ಹತನಾದನು.

No comments:

Post a Comment