ಮೈಸೂರು ಒಡೆಯರು :-
ಮೈಸೂರು ಒಡೆಯರ ಆಳ್ವಿಕೆಯು ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಮೈಸೂರು ಒಡೆಯರ ಮೂಲ ಪುರುಷನು ಯದುರಾಯ (ವಿಜಯರಾಯ) ಮತ್ತು ಕೃಷ್ಣರಾಯ ಎಂಬ ಸಹೋದರರು. ಮೈಸೂರಿನ ಒಡೆಯರು ಯದುವಂಶದವರು. ಕ್ರಿ. ಶ. ೧೪೦೦ ರಲ್ಲಿ ಸಿಂಹಾಸನವೇರಿ ಯದುರಾಯ ೨೩ ವರ್ಷಗಳ ಕಾಲ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯವಾಳಿದನು. ಇವನು ಅನೇಕ ಪಾಳೆಯಗಾರರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದನು. ಆನಂತರ ಇವನ ಮಗ ಬೆಟ್ಟದ ಚಾಮರಾಜ ಒಡೆಯರ (ಕ್ರಿ. ಶ. ೧೪೨೩-೫೯) ನು ೩೬ ವರ್ಷಗಳ ಕಾಲ ರಾಜ್ಯಭಾರ ಮಾಡಿದನು. ಮುಂದೆ ತಿಮ್ಮರಾಜ ಒಡೆಯ(ಕ್ರಿ. ಶ. ೧೪೫೯-೭೮), ಒಂದನೇ ಚಾಮರಾಜ ಒಡೆಯರು (ಕ್ರಿ. ಶ. ೧೪೭೮-೧೫೧೩), ಎರಡನೇ ಬೆಟ್ಟದ ಚಾಮರಾಜ ಒಡೆಯರು (ಕ್ರಿ. ಶ. ೧೫೧೩-೫೩), ಎರಡನೇ ತಿಮ್ಮರಾಜ ಒಡೆಯರು (ಕ್ರಿ. ಶ. ೧೫೫೩-೭೨), ಬೋಳ ಚಾಮರಾಜ ಒಡೆಯರು (ಕ್ರಿ. ಶ. ೧೫೭೨-೭೬), ಮೂರನೇ ಚಾಮರಾಜ ಒಡೆಯರು (ಕ್ರಿ. ಶ. ೧೫೭೬-೭೮) ರಾಜ್ಯಭಾರ ಮಾಡಿದರು.
ಕ್ರಿ.ಶ. ೧೫೭೮ ರಲ್ಲಿ ಸಿಂಹಾಸನವೇರಿದ, ಒಂದನೇ ರಾಜ ಒಡೆಯರು (ಕ್ರಿ. ಶ. ೧೫೭೮-೧೬೧೭) ಅನೇಕ ಪಾಳೆಯಗಾರರನ್ನು ಹತ್ತಿಕ್ಕಿದರಲ್ಲದೆ, ವಿಜಯನಗರ ಅರಸರಿಗೆ ಮೈಸೂರು ಅರಸರು ನೀಡುತ್ತಿದ್ದ ಕಪ್ಪವನ್ನು ನಿಲ್ಲಿಸಿ ಸ್ವತಂತ್ರರಾದರು. ಮೈಸೂರು ಸಂಸ್ಥಾನದಲ್ಲಿ ನವರಾತ್ರಿ ಉತ್ಸವದ ಆಚರಣೆಯನ್ನು ಪ್ರಾರಂಭಿಸಿದವರು ಇವರೆ. ನಂತರ ರಾಜ ಒಡೆಯರ ಮೊಮ್ಮಗ ಚಾಮರಾಜ ಒಡೆಯರು (ಕ್ರಿ. ಶ. ೧೬೧೭-೩೭) ತಮ್ಮ ೧೪ನೇ ವಯಸ್ಸಿನಲ್ಲಿ ಸಿಂಹಾಸನವೇರಿದನು. ಹಾಗಾಗಿ ಆಡಳಿತದ ಜವಾಬ್ದಾರಿಯನ್ನು ಹೊತ್ತಿದ್ದ ದಳವಾಯಿ ಬೆಟ್ಟದ ಅರಸು ತಾನೇ ಸಿಂಹಾಸನವೇರಿಸಲು ಪ್ರಯತ್ನಿಸಿದನು. ಇದು ಚಾಮರಾಜ ಒಡೆಯರಿಗೆ ಗೊತ್ತಾಗಿ ಆತನ ಕಣ್ಣುಗಳನ್ನು ಕೀಳಿಸಿ ಬಂಧನದಲ್ಲಿಟ್ಟರು. ಚಾಮರಾಜ ಒಡೆಯರ ನಂತರ ಸಿಂಹಾಸನವೇರಿದ ಅವರ ಚಿಕ್ಕಪ್ಪ ಎರಡನೇ ರಾಜ ಒಡೆಯರು ಕ್ರಿ. ಶ. ೧೬೩೮ ರಲ್ಲಿ ಕೊಲೆಯಾದರು. ಹಾಗಾಗಿ ಒಂದನೇ ರಾಜ ಒಡೆಯರ ಸಹೋದರನ ಮಗ ಕಂಠೀರವ ನರಸರಾಜ ಒಡೆಯರು ಕ್ರಿ. ಶ. ೧೬೩೮ ರಲ್ಲಿ ಕೊಲೆಯಾದರು. ಹಾಗಾಗಿ ಒಂದನೇಯ ರಾಜ ಒಡೆಯರ ಸಹೋದರನ ಮಗ ಕಂಠೀರವ ನರಸರಾಜ ಒಡೆಯರು (ಕ್ರಿ. ಶ. ೧೬೩೮-೫೯) ಸಿಂಹಾಸನವೇರಿದರು. ಅತ್ಯಂತ ಪರಾಕ್ರಮಿಯಾಗಿದ್ದ ಇವರು ಶ್ರೀರಂಗಪಟ್ಟಣಕ್ಕೆ ದಾಳಿಯಿಟ್ಟಿದ್ದ ಬಹಮನಿ ಸುಲ್ತಾನನ ಸೇನಾನಿ ರಣದುಲ್ಲಾಖಾನನ್ನು ಸೋಲಿಸಿ ಓಡಿಸಿದರು. ಇವರು 'ಕಂಠೀರವಪಣ' ಎಂಬ ನಾಣ್ಯವನ್ನು ಹೊರ ತಂದರು. ತನಗೆ ಮಕ್ಕಳಿಲ್ಲವಾದ್ದರಿಂದ ಇವರು ಬೋಳ ಚಾಮರಾಜ ಒಡೆಯರ ಮೊಮ್ಮಗ ದೊಡ್ಡ ದೇವರಾಜ ಒಡೆಯರ್ (ಕ್ರಿ. ಶ. ೧೬೫೯-೭೨)ಗೆ ಪಟ್ಟ ಕಟ್ಟಿದರು. ದೊಡ್ಡ ದೇವರಾಜ ಒಡೆಯರ್ ರವರು ಶ್ರೀರಂಗಪಟ್ಟಣಕ್ಕೆ ದಾಳಿ ಮಾಡಿದ ಕೆಳದಿಯ ಶಿವಪ್ಪನಾಯಕನನ್ನು ಸೋಲಿಸಿದರಲ್ಲದೆ ಅನಂತರ ದಾಳಿ ಮಾಡಿದ ಬಿಜಾಪುರದ ರಣದುಲ್ಲಾಖಾನನ್ನು ಮತ್ತು ಮಧುರೆಯ ನಾಯಕನನ್ನು ಸೋಲಿಸಿದರು. ಇವರಿಗೆ 'ಹಿಂದೂರಾಯಸುತ್ರಾಣ', 'ಪರರಾಯ ಭಯಂಕರ' ಮುಂತಾದ ಬಿರುದುಗಳಿದ್ದವು.
ದೊಡ್ಡ ದೇವರಾಜ ಒಡೆಯರ್ ನಂತರ ಸಿಂಹಾಸನವೇರಿದ ಚಿಕ್ಕದೇವರಾಜ ಒಡೆಯರ್ (ಕ್ರಿ. ಶ. ೧೬೭೨-೧೭೦೪) ಮರಾಠರಿಂದ ಮತ್ತು ದೆಹಲಿಯ ಔರಂಗಜೇಬನಿಂದ ರಾಜ್ಯ ರಕ್ಷಣೆ ಮಾಡಿದರಲ್ಲದೆ, ಆನಂತರ ಔರಂಗಜೇಬನೊಂದಿಗೆ ಸ್ನೇಹ ಮಾಡಿಕೊಂಡರು. ಔರಂಗಜೇಬನು ಇವರಿಗೆ 'ರಾಜ ಜಗದೇವ' ಎಂಬ ಬಿರುದು ನೀಡಿದ್ದನು. ಚಿಕ್ಕದೇವರಾಜ ಒಡೆಯರ್ ಹೈದರಾಲಿಯ ಸಹಾಯದಿಂದ ದೇವನಹಳ್ಳಿಯನ್ನು ವಶಪಡಿಸಿಕೊಂಡರು. ಚಿಕ್ಕದೇವರಾಯರ ನಂತರ ಅವರ ಮಗ ಮೂಗನಾಗಿದ್ದ ಎರಡನೇ ಕಂಠೀರವ ನರಸರಾಜ ಒಡೆಯರ್ (ಕ್ರಿ. ಶ. ೧೭೦೪-೧೩) ಪ್ರಧಾನಿ ತಿರುಮಲಯ್ಯ ಮತ್ತು ದಳವಾಯಿ ಕಾಂತರಾಜಯ್ಯನವರ ಮೂಲಕ ರಾಜ್ಯಭಾರ ನಡೆಸಿದರು. ನಂತರ ದೊಡ್ಡ ಕೃಷ್ಣರಾಜ ಒಡೆಯರ್ (ಕ್ರಿ. ಶ ೧೭೧೩-೩೧)ಸಿಂಹಾಸನವೇರಿದರೆ ಆನಂತರ ಅವರ ದತ್ತು ಪುತ್ರ ಅಂಕನಹಳ್ಳಿಯ ಚಾಮರಾಜ (೧೭೩೨-೩೪)ಸಿಂಹಾಸನವೇರಿದರು. ಇವರ ಕಾಲದಲ್ಲಿ ದಳವಾಯಿ ದೇವರಾಜಯ್ಯ ಮತ್ತು ನಂಜರಾಜಯ್ಯರ ಕೀಟಲೆ ವಿಪರೀತವಾಗಿತ್ತು. ಅನಂತರ ಕ್ರಿ. ಶ. ೧೭೩೪ ರಲ್ಲಿ ಎರಡನೇ ಕೃಷ್ಣರಾಜ ಸಿಂಹಾಸನವೇರಿದರು. ಕ್ರಿ. ಶ. ೧೭೫೮ ರಲ್ಲಿ ಹೈದರಾಲಿ ಇವರ ದಳವಾಯಿಯಾಗಿ ನೇಮಕಗೊಂಡರು. ಕ್ರಿ. ಶ. ೧೭೬೬ ರಲ್ಲಿ ಸಿಂಹಾಸನವೇರಿದ ನಂಜರಾಜರ ಕಾಲದಲ್ಲಿ ಹೈದರಾಲಿ ಆಡಳಿತ ವ್ಯವಹಾರಗಳನ್ನು ಕೈಗೆತ್ತಿಕೊಂಡನು. ಹೀಗೆ ಹೈದರಾಲಿ ೨೦ ವರ್ಷ ಹಾಗೂ ಟಿಪ್ಪು ೧೭ ವರ್ಷಗಳ ಕಾಲ ಮೈಸೂರನ್ನು ಆಳಿದರು. ಈ ಒಂದು ಅವಧಿಯಲ್ಲಿ ಎರಡನೇ ಕೃಷ್ಣರಾಜ, ನಂಜರಾಜ, ಎಂಟನೇ ಚಾಮರಾಜ ಹಾಗೂ ಒಂಬತ್ತನೇ ಚಾಮರಾಜ ಒಡೆಯರ್ ಮುಂತಾದವರು ಪದಚ್ಯುತರಾದರು.
Thursday, 29 March 2018
ಮೈಸೂರು ಒಡೆಯರು :-
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment