ಕೆಳದಿಯ ಅರಸರು :-
ವಿಜಯನಗರದ ಅರಸರ ಸಾಮಂತರಾಗಿದ್ದ ಇಕ್ಕೇರಿಯ ನಾಯಕರು ಆನಂತರ ಸ್ವತಂತ್ರರಾಗಿ ರಾಜ್ಯಭಾರ ಮಾಡಿದರು. ಬಸವಪ್ಪ ಮತ್ತು ಬಸವ್ವ ದಂಪತಿಗಳ ಪುತ್ರರಾದ ಚೌಡಪ್ಪ ಮತ್ತು ಭದ್ರಪ್ಪ ಎಂಬುವವರು ಕೆಳದಿ ಸಂಸ್ಥಾನದ ಸ್ಥಾಪಕರು. ಚೌಡಪ್ಪನಾಯಕ(ಕ್ರಿ. ಶ. ೧೪೯೯-೧೫೧೪)ನ ಕೀರ್ತಿಯಿಂದಾಗಿ ವಿಜಯನಗರದ ಕೃಷ್ಣದೇವರಾಯನು ಇವನೊಡನೆ ಸ್ನೇಹ ಬೆಳೆಸಿದನು. ವಿಜಯನಗರದ ಮೇಲೆ ದಾಳಿ ಮಾಡಿದ ಬೇಡರನ್ನು ಹಾಗೂ ಮುಸ್ಲಿಂರನ್ನು ಹಿಮ್ಮೆಟ್ಟಿಸಿದ ಚೌಡಪ್ಪನಾಯಕ ಹಾಗೂ ಭದ್ರಪ್ಪನಾಯಕನಿಗೆ ಕೃಷ್ಣದೇವರಾಯನು ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಎಲಿಗಳಲೆ, ಮೋದುರು, ಕಲಿಸ, ಲಾತವಾಡಿಗಳನ್ನು ನೀಡಿ ಅವನ ಆಪ್ತ ಸಾಮಂತರಾಗಿರುವಂತೆ ನೋಡಿಕೊಂಡನು. ಚೌಡಪ್ಪನಾಯಕನ ನಂತರ ಬಂದ ಅವನ ಮಗ ಸದಾಶಿವ ನಾಯಕ (ಕ್ರಿ. ಶ. ೧೫೧೪-೪೬)ನು ರಾಜಧಾನಿಯನ್ನು ಕೆಳದಿಯಿಂದ ಇಕ್ಕೇರಿಗೆ ಬದಲಾಯಿಸಿದನು. ಆನಂತರ ಬಂದ ದೊಡ್ಡ ಸಂಕಣ್ಣನಾಯಕ(ಕ್ರಿ. ಶ. ೧೫೪೬-೫೭)ನು ಉಡುಗಣೆಯ ಪಾಳೆಯಗಾರನನ್ನು ಸೋಲಿಸಿದನು. ಇವನ ತಮ್ಮ ಚಿಕ್ಕ ಸಂಕಣ್ಣನಾಯಕ( ಕ್ರಿ. ಶ. ೧೫೫೯-೧೫೭೧)ನು ೧೫೬೫ರ ತಾಳಿಕೋಟೆ ಕದನದಲ್ಲಿ ವಿಜಯನಗರದ ಪರವಾಗಿ ಹೋರಾಡಿದನು. ಈತನನ್ನು ಕೊಲೆ ಮಾಡಿ ಅವನ ಅಣ್ಣನ ಮಗ ರಾಮರಾಯ (ಕ್ರಿ. ಶ. ೧೫೭೦-೧೫೮೨) ರವರೆಗೆ ಅಸಮರ್ಪಕ ಆಡಳಿತ ನೀಡಿದನು.
ಕ್ರಿ.ಶ. ೧೫೮೨ ರಲ್ಲಿ ಸಿಂಹಾಸನವೇರಿದ ವೆಂಕಟಪ್ಪನಾಯಕ (ಕ್ರಿ. ಶ. ೧೫೮೨-೧೬೨೯) ವಿಜಯನಗರದ ಸಾಮಂತನಾಗಿರದೆ ಸ್ವತಂತ್ರನಾದನು. ಇವನ ಕಾಲದಲ್ಲಿ ಕೆಳದಿ ಸಂಸ್ಥಾನ ಸಂಪದ್ಭರಿತವಾಯಿತು. ಇವನ ಕಾಲದಲ್ಲಿ ಕ್ರಿ. ಶ. ೧೬೨೩ ರಲ್ಲಿ ಇಟಲಿಯ ಪ್ರವಾಸಿ ಪೀಟ್ರೊ ಡೆಲ್ಲಾವಲ್ಲೆ ಇಕ್ಕೇರಿಗೆ ಭೇಟಿ ನೀಡಿದ್ದನು. ವೆಂಕಟಪ್ಪನಾಯಕನ ನಂತರ ಅವನ ಮೊಮ್ಮಗ ವೀರಭದ್ರನಾಯಕ (ಕ್ರಿ. ಶ. ೧೬೨೯-೧೬೪೫) ಸಿಂಹಾಸನವೇರಿದನು. ಬಾಣಾವರ ಮತ್ತು ತರೀಕೆರೆಯ ಪಾಳೆಯಗಾರರು ಬಿಜಾಪುರದ ಆದಿಲ್ ಶಾಹಿಗಳೊಂದಿಗೆ ಸೇರಿಕೊಂಡು ಕಾಟ ನೀಡಲಾರಂಭಿಸಿದ ಕಾರಣ ಇವನು ಬಿಜಾಪುರದ ಸುಲ್ತಾನನಿಗೆ ಕಪ್ಪಕಾಣಿಕೆ ನೀಡಿ ಅವನ ಸಾಮಂತನಾದನು. ತನ್ನ ರಾಣಿಯ ಸಾವಿನಿಂದ ಜಿಗುಪ್ಸೆ ಹೊಂದಿ ರಾಜ್ಯಭಾರದತ್ತ ಈತ ಅಷ್ಟಾಗಿ ಗಮನ ನೀಡಿದ್ದರಿಂದ ಶಿವಪ್ಪನಾಯಕ (ಕ್ರಿ. ಶ. ೧೬೪೫-೧೬೬೦)ನಿಗೆ ಪಟ್ಟಾಭಿಷೇಕವಾಯಿತು. ಇವನು ಕೆಳದಿ ಅರಸರಲ್ಲೆಲ್ಲಾ ಪ್ರಖ್ಯಾತನಾದನು. ಇವನ ಕಾಲದಲ್ಲಿ ಕೆಳದಿಯ ಖ್ಯಾತಿ ಎಲ್ಲೆಡೆ ಹಬ್ಬಿತು. ಇವನು ಅನೇಕ ಶತೃಗಳನ್ನು ಸದೆಬಡಿದನು. ಮೈಸೂರು ದೊರೆ ದೇವರಾಜ ಒಡೆಯನ ಸೈನ್ಯವನ್ನು ಬೇಲೂರಿನಲ್ಲಿ ಸೋಲಿಸಿದನು. ಅತ್ಯುತ್ತಮ ಆಡಳಿತ ನೀಡಿದ ಈತ ಕೃಷಿ ಭೂಮಿಗೆ ಅದರ ಉತ್ಪನ್ನದ ಆಧಾರದ ಮೇಲೆ ಕಂದಾಯ ನಿಗದಿ ಮಾಡಿದ್ದನು. ಈ ಪದ್ಧತಿ ಶಿವಪ್ಪನಾಯಕನ ಶಿಸ್ತು ಎಂದು ಪ್ರಸಿದ್ಧವಾಗಿತ್ತು. ಶಿವಪ್ಪನಾಯಕನ ನಂತರ ಇವನ ಎರಡನೇ ತಮ್ಮ ವೆಂಕಟಪ್ಪನಾಯಕ( ಕ್ರಿ. ಶ. ೧೬೬೦-೬೧) ಮತ್ತು ಮಗ ಭದ್ರಪ್ಪ( ಕ್ರಿ. ಶ. ೧೬೬೧-೭೧) ಕೊಲೆಯಾಗಲಾಗಿ ಇವನ ಪತ್ನಿ ಚನ್ನಮ್ಮಾಜಿ (ಕ್ರಿ. ಶ. ೧೬೭೧-೯೭) ಅಧಿಕಾರ ಸೂತ್ರ ಹಿಡಿದು ಸಮರ್ಥವಾಗಿ ರಾಜ್ಯ ರಕ್ಷಣೆ ಮಾಡಿದಳು. ಔರಂಗಜೇಬನ ದಾಳಿಯಿಂದ ಓಡಿ ಬಂದಿದ್ದ ಮರಾಠರ ರಾಜರಾಮನಿಗೆ ರಕ್ಷಣೆ ನೀಡಿ, ತನ್ನ ಮೇಲೂ ದಾಳಿ ಮಾಡಿದ್ದ ಔರಂಗಜೇಬನನ್ನು ಹಿಮ್ಮೆಟ್ಟಿಸಿದಳು. ಬಸವಭೂಪಾಲ(ಬಸಪ್ಪನಾಯಕ) ಎಂಬಾತನನ್ನು ದತ್ತು ತೆಗೆದುಕೊಂಡು ಆಡಳಿತ ತರಬೇತಿ ನೀಡಿದಳು. ಬಸಪ್ಪನಾಯಕ ಅಪ್ರತಿಮ ವೀರ ಹಾಗೂ ವಿದ್ವಾಂಸ. ಇವನ ನಂತರ ಎರಡನೇ ಸೋಮಶೇಖರನಾಯಕ (ಕ್ರಿ. ಶ. ೧೭೧೪-೩೯) ಸಿಂಹಾಸನವೇರಿದನು. ಸೋಮಶೇಖರನಾಯಕನ ನಂತರ ಸಿಂಹಾಸನವೇರಿದ ಎರಡನೇ ಬಸವಪ್ಪ (ಕ್ರಿ. ಶ. ೧೭೩೯-೫೪)ನು ಚಿತ್ರದುರ್ಗ ಮದಕರಿನಾಯಕ
ಮಾಯಕೊಂಡ ಎಂಬ ಯುಧ್ಧದಲ್ಲಿ ಹತನಾದನು.
ಹೀಗಾಗಿ ಅವನ ದತ್ತು ಪುತ್ರ ಚನ್ನಬಸಪ್ಪ (ಕ್ರಿ. ಶ. ೧೭೫೪-೫೭) ಸಿಂಹಾಸನವೇರಿದನು. ನಂತರ ಸಿಂಹಾಸನವೇರಿದ ಮೂರನೇ ಸೋಮಶೇಖರನಾಯಕ ಕ್ರಿ. ಶ. ೧೭೬೩ ರಲ್ಲಿ ಚಿತ್ರದುರ್ಗದ ಪಾಳೆಯಗಾರರೊಂದಿಗೆ ಹೈದರಾಲಿಯು ಬಿದನೂರನ್ನು ಮುತ್ತಿದಾಗ ನಡೆದ ಯುದ್ಧದಲ್ಲಿ ಸೆರೆ ಸಿಕ್ಕನು. ಇದರಿಂದಾಗಿ ಕೆಳದಿಯ ರಾಜ್ಯ ಮೈಸೂರಿನಲ್ಲಿ ವಿಲೀನವಾಯಿತು.
ಕೆಳದಿಯ ಅರಸರು ವೀರಶೈವವಾದರೂ,
ಧಾರ್ಮಿಕ ಸಹಿಷ್ಣುಗಳಾಗಿದ್ದು, ಎಲ್ಲಾ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಂಡರು. ಹಲವಾರು ದೇವಾಲಯಗಳನ್ನು ನಿರ್ಮಿಸಿದರು.
Wednesday, 28 March 2018
ಕೆಳದಿಯ ಅರಸರು:-
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment