Friday, 30 March 2018

ಕಮಿಷನರುಗಳ ಆಳ್ವಿಕೆ (ಕ್ರಿ. ಶ. ೧೮೩೧-೮೧)

ಕಮಿಷನರುಗಳ ಆಳ್ವಿಕೆ :-
            ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ ಕರ್ನಲ್ ಜೆ. ಬ್ರಿಗ್ಸ್ ಹಿರಿಯ ಕಮಿಷನರ್ ಆಗಿ ಮತ್ತು ಲೂಷಿಂಗ್ ಟನ್ ಕಿರಿಯ ಕಮಿಷನರ್ ಆಗಿ ಇಬ್ಬರು ಅಧಿಕಾರ ನಡೆಸಿದರು. ಇವರ ನಂತರ ರಾಜ್ಯದ ಆಡಳಿತವು ಒಬ್ಬನೇ ಕಮಿಷನರನ ಆಡಳಿತಕ್ಕೆ ಒಳಪಟ್ಟಿತು. ಕ್ರಿ. ಶ. ೧೮೩೪ ರಲ್ಲಿ ನೇಮಕವಾದ ಮಾರ್ಕ್ ಕಬ್ಬನ್ ಕ್ರಿ. ಶ. ೧೮೬೧ ರವರೆಗೆ ಅಧಿಕಾರ ನಡೆಸಿದನು. ಇವನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾದವಲ್ಲದೆ, ಕ್ರಿ. ಶ. ೧೮೫೯ ರಲ್ಲಿ ಬೆಂಗಳೂರಿನ ಜೋಲಾರಪೇಟೆಗೆ ರಾಜ್ಯದ ಮೊಟ್ಟ ಮೊದಲನೇ ರೈಲು ಮಾರ್ಗ ನಿರ್ಮಾಣವಾಯಿತು. ಕ್ರಿ. ಶ. ೧೮೫೮ ರಲ್ಲಿ ಸಾರ್ವಜನಿಕ ವಿದ್ಯಾ ಇಲಾಖೆಯನ್ನು ರೂಪಿಸಿದ ಇವನು ಬೆಂಗಳೂರು, ತುಮಕೂರು, ಮೈಸೂರು, ಶಿವಮೊಗ್ಗ, ಮುಂತಾದೆಡೆ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಿದನು. ಇವನ ನಂತರ ಸಿ. ಬಿ. ಸ್ಯಾಂಡರ್ಸ್ (ಕ್ರಿ. ಶ. ೧೮೬೧-೬೨) ತಾತ್ಕಾಲಿಕ ಕಮಿಷನರ್ ಆಗಿದ್ದನು. ಕ್ರಿ. ಶ. ೧೮೬೨ ರಲ್ಲಿ ಲೂಯಿಸ್ ಬೆಂಥಾಂ ಬೌರಿಂಗ್ ಮೈಸೂರು ರಾಜ್ಯದ ಕಮಿಷನರ್ ಆಗಿ ನೇಮಕಗೊಂಡರು. ೧೮೭೦ ರವರೆಗೆ ಅಧಿಕಾರ ನಡೆಸಿದ ಇವರ ಅವಧಿಯಲ್ಲಿ ೧೮೬೩ ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸೆರೆಮನೆಯನ್ನು, ೧೮೬೪ ರಲ್ಲಿ ಹೈಕೋರ್ಟನ್ನು ಸ್ಥಾಪಿಸಲಾಯಿತು. ೧೮೬೮ ರಲ್ಲಿ ಅಠಾರ ಕಛೇರಿಯ ಕಟ್ಟಡ ನಿರ್ಮಾಣವಾಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕಟ್ಟಡ ಸಹ ೧೮೬೦ ರಲ್ಲಿ ಇವರ ಅವಧಿಯಲ್ಲಿ ನಿರ್ಮಾಣವಾಯಿತು. ಇವರ ಅವಧಿಯಲ್ಲೇ ಮೈಸೂರು ಸಂಸ್ಥಾನದ ಆಡಳಿತವನ್ನು ಮುಮ್ಮಡಿ ಕೃಷ್ಣರಾಜರ ದತ್ತು ಮಗ ೧೦ನೇ ಚಾಮರಾಜೇಂದ್ರರಿಗೆ ೧೮ ವರ್ಷ ತುಂಬಿದಾಕ್ಷಣ ಹಿಂದಿರುಗಿಸಲು ನಿರ್ಧಾರವಾಯಿತು.
           ಬೌರಿಂಗರ ನಂತರ ರಿಚರ್ಡ್ ಮೀಡ್ (೧೮೭೦-೭೫), ಸ್ಯಾಂಡರ್ಡ್ (೧೮೭೫-೭೭) ಮತ್ತು ಜೆ. ಡಿ. ಗೋರ್ಡನ್ (೧೮೭೮-೮೧) ಕಮಿಷನರ್ ಆಗಿ ಅಧಿಕಾರ ನಡೆಸಿದರು.

No comments:

Post a Comment