ಕಮಿಷನರ್ ಆಳ್ವಿಕೆ ನಂತರ ಮೈಸೂರು ಆಡಳಿತ :-
೫೦ ವರ್ಷಗಳ ಬ್ರಿಟಿಷರ ಆಡಳಿತದ ನಂತರ ಮೈಸೂರು ರಾಜ್ಯದ ಉಸ್ತುವಾರಿ ಒಡೆಯರಿಗೆ ವಾಪಸಾಗಲಾಗಿ ೧೮೮೧ ರ ಮಾರ್ಚ್ ೨೫ ರಂದು ೧೦ನೇ ಚಾಮರಾಜ ಒಡೆಯರ್ ಸಿಂಹಾಸನವೇರಿದರು. ಇವರಿಗೆ ಬ್ರಿಟಿಷ್ ರೆಸಿಡೆಂಟನಾಗಿ ಜೆ. ಡಿ. ಗೋರ್ಡನ್ ಹಾಗೂ ದಿವಾನರಾಗಿ ಸಿ. ರಂಗಚಾರ್ಲುರವರು ನೇಮಕಗೊಂಡರು. ೧೮೮೧ ರ ಮಾರ್ಚ್ ೨೫ ರಂದು ೧೦ನೇ ಚಾಮರಾಜ ಒಡೆಯರ್ ಸಿಂಹಾಸನವೇರಿದರು. ಇವರಿಗೆ ಬ್ರಿಟಿಷ್ ರೆಸಿಡೆಂಟನಾಗಿ ಜೆ. ಡಿ. ಗೋರ್ಡನ್ ಹಾಗೂ ದಿವಾನರಾಗಿ ಸಿ. ರಂಗಚಾರ್ಲುರವರು ನೇಮಕಗೊಂಡರು. ೧೮೮೧ ರ ದಸರಾ ಅವಧಿಯಲ್ಲಿ 'ಪ್ರಜಾಪ್ರತಿನಿಧಿ ಸಭೆ' ಯನ್ನು ಸ್ಥಾಪಿಸಲಾಯಿತು. ಅದೇ ವರ್ಷ ಕೋಲಾರದಲ್ಲಿ ಚಿನ್ನದ ಗಣಿ ಪ್ರಾರಂಭವಾಯಿತು. ೧೮೮೩ ರಲ್ಲಿ ನಿಧನರಾದ ರಂಗಚಾರ್ಲು ನಂತರ ಕೆ. ಶೇಷಾದ್ರಿ ಅಯ್ಯರ್ ದಿವಾನರಾಗಿ ನೇಮಕವಾದರು. ಇವರ ಕಾಲದಲ್ಲಿ ೧೮೮೪ ರಲ್ಲಿ ತಾಲ್ಲೂಕು ಬೋರ್ಡುಗಳನ್ನು ಸ್ಥಾಪಿಸಲಾಯಿತು. ೧೮೯೩ ರಲ್ಲಿ ಮೈಸೂರು - ನಂಜನಗೂಡು ರೈಲು ಮಾರ್ಗ, ೧೮೯೯ ರಲ್ಲಿ ಬೀರೂರು - ಶಿವಮೊಗ್ಗ ರೈಲು ಮಾರ್ಗ ನಿರ್ಮಾಣಗೊಂಡವು. ೧೮೯೯-೧೯೦೦ ರ ಅವಧಿಯಲ್ಲಿ ಶಿವನಸಮುದ್ರ ಜಲವಿದ್ಯುತ್ ಯೋಜನೆ ಪ್ರಾರಂಭವಾಯಿತು. ಮೃಗಾಲಯ ಸಹ ಇವರ ಅವಧಿಯಲ್ಲೇ ಪ್ರಾರಂಭವಾಯಿತು. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ ಶೇಷಾದ್ರಿ ಅಯ್ಯರರವರು ೧೯೦೧ ರಲ್ಲಿ ನಿವೃತ್ತರಾಗಿ ಅದೇ ವರ್ಷ ತೀರಿಕೊಂಡರು. ಈ ಮಧ್ಯೆ ಚಾಮರಾಜ ಒಡೆಯರ್ ಸಹ ಡಿಫ್ತಿರಿಯಾ ರೋಗಕ್ಕೆ ತುತ್ತಾಗಿ ೧೮೯೪ ರಲ್ಲಿ ತೀರಿಕೊಂಡಿದ್ದರು. ೧೮೯೫ ರಲ್ಲಿ ಸಿಂಹಾಸನವೇರಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅಪ್ರಾಪ್ತರಾಗಿದ್ದ ಕಾರಣ ಮಹಾರಾಣಿ ಕೆಂಪರಾಜಮ್ಮಣ್ಣಿಯವರು ರೀಜೆಂಟರಾಗಿ ರಾಜ್ಯಭಾರ ನೋಡಿಕೊಂಡರು. ೧೯೦೨ ರಲ್ಲಿ ಕೃಷ್ಣರಾಜ ಒಡೆಯರ್ ನೇರ ಆಳ್ವಿಕೆ ಪ್ರಾರಂಭಿಸಿದರು. ಇವರು ೧೯೦೭ ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಜೊತೆಗೆ ನ್ಯಾಯ ವಿಧಾಯಕ ಸಭೆಯನ್ನು ರಚಿಸಿದರು. ಸರ್. ಎಂ. ವಿಶ್ವೇಶ್ವರಯ್ಯನವರು ೧೯೧೨ ರಲ್ಲಿ ದಿವಾನರಾಗಿ ನೇಮಕಗೊಂಡರು. ಇವರ ಅವಧಿಯಲ್ಲಿ ಕನ್ನಂಬಾಡಿ ಆಣೆಕಟ್ಟೆಯ ನಿರ್ಮಾಣ ಕಾರ್ಯ ೧೯೧೧ ರಲ್ಲಿ ಪ್ರಾರಂಭವಾಯಿತು. ೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು. ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭವಾಯಿತು. ೧೯೧೭ ರಲ್ಲಿ ಚನ್ನಪಟ್ಟಣದ ಬಳಿ ರೇಷ್ಮೆ ಬೆಳೆಯ ಅಧ್ಯಯನಕ್ಕಾಗಿ ಒಂದು ಸಂಶೋಧನಾ ಸಂಸ್ಥೆ ಸ್ಥಾಪಿತವಾಯಿತು. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಹ ವಿಶ್ವೇಶ್ವರಯ್ಯನವರ ಕೊಡುಗೆಯೇ. ೧೯೧೮ರಲ್ಲಿ ಅವರು ದಿವಾನಗಿರಿಗೆ ರಾಜೀನಾಮೆ ನೀಡಿದ ನಂತರ ಎಂ. ಕಾಂತರಾಜೇ ಅರಸ್ (೧೯೧೮-೨೨), ಎ. ಆರ್. ಬ್ಯಾನರ್ಜಿ (೧೯೨೨-೨೬) ದಿವಾನರಾಗಿ ಕಾರ್ಯ ನಿರ್ವಹಿಸಿದರು. ೧೯೨೬ ರಲ್ಲಿ ದಿವಾನರಾಗಿ ನೇಮಕವಾದ ಮಿರ್ಜಾ ಇಸ್ಮಾಯಿಲ್ ಕಾಲದಲ್ಲಿ ೧೯೩೨ ರಲ್ಲಿ ಕನ್ನಂಬಾಡಿ ಆಣೆಕಟ್ಟೆಯ ನಿರ್ಮಾಣ ಪೂರ್ಣಗೊಂಡಿತು. ಇವರು ಇರ್ವಿನ್ ನಾಲೆಯನ್ನು ನಿರ್ಮಿಸಿದರು. ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಸಿಮೆಂಟ್ ಮತ್ತು ಕಾಗದ ಕಾರ್ಖಾನೆ, ಹಿಂದೂಸ್ತಾನ್ ವಿಮಾನ ಕಾರ್ಖಾನೆ, ವಿದ್ಯುಚ್ಛಕ್ತಿ ಉಪಕರಣಗಳ ಕಾರ್ಖಾನೆ ಇವರ ಅವಧಿಯಲ್ಲಿ ಸ್ಥಾಪಿತವಾದವು. ೧೯೨೬ ರಲ್ಲಿ ನಂಜನಗೂಡು - ಚಾಮರಾಜನಗರ ನಡುವಿನ ರೈಲು ಮಾರ್ಗ ಪೂರ್ಣಗೊಂಡಿತು. ಕನ್ನಂಬಾಡಿ ಆಣೆಕಟ್ಟುಗಳ ಕೆಳಗಡೆ ಬೃಂದಾವನ ಉದ್ಯಾನವನ್ನು ಕೂಡ ಪ್ರಾರಂಭಿಸಿದರು. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದರು. ಅಗಸ್ಟ್ ೧೯೪೦ ರಲ್ಲಿ ನಿಧನರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾನದಲ್ಲಿ ಶ್ರೀಜಯಚಾಮರಾಜ ಒಡೆಯರ್ ಸಿಂಹಾಸನವೇರಿದರು. ಮಿರ್ಜಾ ಇಸ್ಮಾಯಿಲ್ ೧೯೪೧ ರಲ್ಲಿ ದಿವಾನ ಪದವಿಯಿಂದ ನಿವೃತ್ತರಾದರು. ಇವರ ನಂತರ ನ್ಯಾಪತಿ ಮಾಧವರಾಯರು ದಿವಾನರಾದರು. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಸ್ವತಂತ್ರ ಚಳುವಳಿ ತೀವ್ರವಾಗಿತ್ತು. ೧೯೪೧ ಮತ್ತು ೧೯೪೫ ರಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಚುನಾವಣೆಗಳು ನಡೆದವು. ೧೯೪೫ ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ೧೯೪೬ ರಲ್ಲಿ ದಿವಾನರಾಗಿ ನೇಮಕಗೊಂಡ ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮೈಸೂರು ರಾಜ್ಯದ ಕೊನೆಯ ದಿವಾನರು. ಮೈಸೂರು ರಾಜ್ಯದಲ್ಲಿ ಸ್ವಾತಂತ್ರ್ಯ ಚಳವಳಿ ಜೊತೆಗೆ ಜವಾಬ್ದಾರಿ ಸರ್ಕಾರದ ರಚನೆಗಾಗಿ ಸಹ ಚಳುವಳಿಗಳು ಪ್ರಾರಂಭವಾದವು. ಅಗಸ್ಟ್ ೧೯೪೭ ರಲ್ಲಿ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರ ಸೆಪ್ಟೆಂಬರ್ ೧೯೪೭ ರಲ್ಲಿ ಜಯಚಾಮರಾಜ ಒಡೆಯರ್ ಜವಾಬ್ದಾರಿ ಸರ್ಕಾರ ರಚನೆಗೆ ಒಪ್ಪಿಕೊಂಡರು. ೧೯೪೭ ರ ಅಕ್ಟೋಬರ್ ೨೪ರಂದು ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ರಚನೆಯಾಗಲಾಗಿ ಕಾಂಗ್ರೆಸ್ ನ ಚಂಗಲ್ ರಾಯರೆಡ್ಡಿ ಮೈಸೂರಿನ ಪ್ರಥಮ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡುರು. ೧೯೫೬ ರಲ್ಲಿ ಮಹಾರಾಜರ ಪದವಿ ರದ್ದಾದ ಮೇಲೆ ಜಯಚಾಮರಾಜ ಒಡೆಯರ್ ಮೈಸೂರಿನ ರಾಜಪ್ರಮುಖರಾಗಿ ನೇಮಕಗೊಂಡರಲ್ಲದೆ ಅನಂತರ ಮದ್ರಾಸಿನ ರಾಜಪ್ರಮುಖರಾಗಿ ಕಾರ್ಯ ನಿರ್ವಹಿಸಿದರು. ಅವರು ೧೯೭೪ ರ ಸೆಪ್ಟೆಂಬರ್ ೨೪ ರಂದು ನಿಧನರಾದರು.
Saturday, 31 March 2018
ಕಮಿಷನರ್ ಆಳ್ವಿಕೆ ನಂತರ ಮೈಸೂರು ಆಡಳಿತ :-
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment