ಡಾ. ಬಿ. ಆರ್. ಅಂಬೇಡ್ಕರ್ (೧೮೯೧-೧೯೫೬):-
'ದಲಿತ ಸೂರ್ಯ', 'ಸಂವಿಧಾನ ಶಿಲ್ಪಿ', 'ಸಮತಾ ಶಿಲ್ಪಿ', 'ಭಾರತ ಭಾಗ್ಯವಿದಾತ', 'ಭಾರತ ರತ್ನ' ಭೀಮರಾವ್ ರಾಮಜಿ ಅಂಬೇಡ್ಕರ್ ರವರು ಖ್ಯಾತ ದಲಿತ ನಾಯಕರು. ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ 'ಅಂಬಾವಾಡಿ' ಗ್ರಾಮದ ಮಹಾರ್ ದಲಿತ ಕುಟುಂಬದಲ್ಲಿ ಏಪ್ರಿಲ್ ೧೪,೧೮೯೧ ರಂದು ಜನಿಸಿದರು. ತಂದೆ ರಾಮ್ ಜಿ ಸಕ್ಪಾಲ್ ಬಾಂಬೆ ಮಿಲಿಟರಿಯಲ್ಲಿದ್ದರು. ತಾಯಿ ಭೀಮಾಬಾಯಿ. ಅಂಬೇಡ್ಕರ್ ಬಾಲ್ಯದಲ್ಲಿ ಸವರ್ಣೀಯರ ಮಡಿವಂತಿಕೆಯ ಕೋಪಾತಾಪಗಳ ಮಧ್ಯೆ ಬೆಳೆದರು. ಅವರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಸತಾರದಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ ೧೯೦೮ರಲ್ಲಿ ಮೆಟ್ರಿಕ್ಯುಲೇಷನ್ ಪಾಸಾದರು. ಅಲ್ಲಿದ್ದ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕರು ಭೀಮಜಿಯನ್ನು ಪ್ರೀತಿಯಿಂದ ಅಂಬೇಡ್ಕರ್ ಎಂದು ಕರೆಯುತ್ತಿದ್ದರು. ಅಂದಿನಿಂದ ಭೀಮ್ ಜಿಗೆ ಅದೇ ಹೆಸರಾಯಿತು. ಅಂಬೇಡ್ಕರ್ ಬಾಂಬೆಯ ಎಲ್ಫಿನ್ ಸ್ಟನ್ ಕಾಲೇಜಿನಿಂದ ೧೯೧೨ ರಲ್ಲಿ ಬಿ. ಎ. ಪದವಿ ಪಡೆದರು. ಬರೋಡಾದ ಮಹಾರಾಜ ಸಯಾಜಿರಾವ್ ಗಾಯಕವಾಡರು ಕೊಟ್ಟ ಧನಸಹಾಯದ ನೆರವಿನಿಂದ ಅಮೇರಿಕಾ ಮತ್ತು ಇಂಗ್ಲೆಂಡಿನಲ್ಲಿ ಶಿಕ್ಷಣ ಮುಗಿಸಿದರು. ಅವರು ಬರೆದ 'ಪ್ರಾಚೀನ ಭಾರತದಲ್ಲಿ ವಾಣಿಜ್ಯ ವ್ಯವಹಾರ' ಹಾಗೂ 'ಬ್ರಿಟಿಷ್ ಆಡಳಿತದಲ್ಲಿ ಭಾರತದ ಹಣಕಾಸಿನ ವ್ಯವಸ್ಥೆಯ ವಿಕಾಸ' ಎಂಬ ಪ್ರಬಂಧಗಳಿಗೆ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಎಂ. ಎ. ಮತ್ತು ಪಿ. ಎಚ್. ಡಿ. ಪದವಿಗಳನ್ನು ನೀಡಿತು. ಅದೇ ರೀತಿ ' ಬ್ರಿಟಿಷ್ ಭಾರತದಲ್ಲಿ ಕೇಂದ್ರ ಹಣಕಾಸಿನ ಪ್ರಾಂತೀಯ ವಿಕೇಂದ್ರಿಕರಣ' ಮತ್ತು' ರೂಪಾಯಿ ಸಮಸ್ಯೆ ' ಎಂಬ ಪ್ರಬಂಧಗಳಿಗೆ ಲಂಡನ್ ವಿಶ್ವವಿದ್ಯಾಲಯದ ಎಂ. ಎಸ್. ಸಿ. ಹಾಗೂ ಡಿ. ಎಸ್ಸಿ. ಪದವಿಗಳನ್ನು ನೀಡಿತು. ನಂತರ ಬಾರ್ ಲಿಟ್ ಲಾ ಮಾಡಿದರು. ಮಹಾಮೇದಾವಿಯಾದ ಅಂಬೇಡ್ಕರ್ ಇಷ್ಟೊಂದು ಉನ್ನತ ಶಿಕ್ಷಣ ಪಡೆದ ಏಕೈಕ ದಲಿತರಾಗಿದ್ದರು. ರಮಾಬಾಯಿಯವರೊಡನೆ ಅಂಬೇಡ್ಕರ್ ರ ವಿವಾಹವಾಯಿತು.
ಅಂಬೇಡ್ಕರ್ ಬಾಂಬೆಯಲ್ಲಿ ವಕೀಲ ವೃತ್ತಿ ಕೈಗೊಂಡರು. ನಂತರ ಕಾಮರ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಬಾಂಬೆ ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿ, ಬಾಂಬೆ ಶಾಸಕಾಂಗ ಸಭೆಯ ಸದಸ್ಯರಾಗಿ, ೧೯೪೨ ರಲ್ಲಿ ವೈಸ್ರಾಯ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಭಾರತ ಸರ್ಕಾರದ ಪ್ರಥಮ ಕಾನೂನು ಮಂತ್ರಿಯಾಗಿ ಸೇವೆ ಮಾಡಿದರು. ೧೯೪೮ರಲ್ಲಿ ಡಾ. ಶಾರದಾ ಕಬೀರರೊಡನೆ ೨ನೇ ವಿವಾಹವಾದರು. ಅಂಬೇಡ್ಕರ್ ಗೆ ಯಶವಂತನೆಂಬ ಪುತ್ರನಿದ್ದನು. ಅವರು ೧೯೫೬ರಲ್ಲಿ ನಾಗಪುರ ದಲಿತ ಸಮ್ಮೇಳನದಲ್ಲಿ ೫ಲಕ್ಷ ದಲಿತರೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರವಾದರು. ಬುದ್ಧ ಅವರ ಅಚ್ಚುಮೆಚ್ಚಿನ ದೇವರಾಗಿದ್ದರು. ಡಿಸೆಂಬರ್ ೬,೧೯೫೬ ರಂದು ದಲಿತ ಸೂರ್ಯ ಅಸ್ತಂಗತವಾಯಿತು.
ದಲಿತರಾಗಿ ಅಂಬೇಡ್ಕರರ ಕೊಡುಗೆ (ಸಾಧನೆಗಳು) :-
ಶತಮಾನಗಳಿಂದಲೂ ಸವರ್ಣೀಯರ ತುಳಿತಕ್ಕೆ ಒಳಗಾಗಿದ್ದ ದಲಿತರ ನೋವಿನ ಸೆಲೆಯಾಗಿ ಅಂಬೇಡ್ಕರ್ ಕಂಡರು. ದಲಿತರ ವಿಮೋಚಕನಾಗಿ ಅಸ್ಪೃಶ್ಯತೆಯ ನಿವಾರಣೆಯೇ ನನ್ನ ಜನ್ಮ ಸಿದ್ಧ ಹಕ್ಕು ಎಂದು ಅವರು ಘೋಷಿಸಿದರು. ದಲಿತರ ಉದ್ಧಾರಕ್ಕೆ ಅವರ ಬದುಕು ಮೀಸಲಾಗಿತ್ತು. ದಲಿತರನ್ನು ಮೇಲೆತ್ತಲು ಅವರು ಕೈಗೊಂಡ ಕಾರ್ಯಗಳು ಇಂತಿವೆ. -
೧. ದಲಿತರ ಸಂಘಟನೆ :-
೧೯೨೪ ರಲ್ಲಿ ಬಹಿಷ್ಕೃತ ಹಿತಕಾರಣಿ ಮಹಾಸಭಾವನ್ನು ಸ್ಥಾಪಿಸಿದರು. ದಲಿತರಲ್ಲಿ ಜಾಗೃತಿ ಮೂಡಿಸುವುದು, ವಿದ್ಯಾಪ್ರಚಾರ, ವಾಚನಾಲಯ, ವಸತಿಗೃಹಗಳ ನಿರ್ಮಾಣ ಅದರ ಉದ್ದೇಶಗಳಾಗಿದ್ದವು. ಅದು ಕೊಲ್ಲಾಪುರದಲ್ಲಿ ೧೯೨೫ರಲ್ಲಿ ಒಂದು ವಸತಿಗೃಹವನ್ನು ನಿರ್ಮಿಸಿತು. ಹಾಗೂ ದಲಿತರ ನೈತಿಕ ಉನ್ನತಿಗೆ ಬಹಳಷ್ಟು ಶ್ರಮಿಸಿತು.
೨. ಪತ್ರಿಕೆಗಳು :-
ದಲಿತರನ್ನು ಬೌದ್ಧಿಕವಾಗಿ ಎಚ್ಚರಿಸಲು "ಮೂಕನಾಯಕ" (೧೯೨೦), "ಬಹಿಷ್ಕೃತ ಭಾರತ" (೧೯೨೭), "ಸಮತಾ ಜನತಾ" ಎಂಬ ಪತ್ರಿಕೆಗಳನ್ನು ಹೊರಡಿಸಿದರು. ಅವುಗಳಲ್ಲಿ ದಲಿತರ ಮೇಲೆ ಸವರ್ಣೀಯರ ದೌರ್ಜನ್ಯವನ್ನು ಖಂಡಿಸಿ ಲೇಖನಗಳನ್ನು ಬರೆದರು. ಅವು ಸ್ವಾಭಿಮಾನ, ಸ್ವಾವಲಂಬನೆ, ಸ್ವಾನಂಬಿಕೆ ಮೂಡಿಸಿದವು.
೩. ಮಹಾಡ್ ಕೆರೆಯ ಹೋರಾಟ (೧೯೨೭):-
ಮಹಾರಾಷ್ಟ್ರದ ಕೊಲಾಬಾ ಜಿಲ್ಲೆಯ ಮಹಾಡ್ ನ ಚೌವ್ಡಾಲ್ ಕೆರೆಯಲ್ಲಿ ದಲಿತರಿಗೆ ನೀರು ಕುಡಿಯುವುದನ್ನು ನಿಷೇಧಿಸಲಾಗಿತ್ತು. ಸರ್ಕಾರ ಅದನ್ನು ದಲಿತರು ಉಪಯೋಗಿಸಬಹುದೆಂದು ಶಾಸನ ಮಾಡಿತ್ತು. ಅಂಬೇಡ್ಕರ್ ನೇತೃತ್ವದಲ್ಲಿ ೧೦,೦೦೦ ದಲಿತರು ಮಹಡ್ ಕೆರೆಯ ಹೋರಾಟ ನಡೆಸಿ ಕೆರೆಯ ನೀರನ್ನು ದಲಿತರ ಉಪಯೋಗಕ್ಕೆ ಬಿಡುವಂತೆ ಒತ್ತಾಯಿಸಿ ಕೆರೆಯ ನೀರನ್ನು ಕುಡಿದರು. ಪ್ರಕೃತಿ ಕೊಟ್ಟ ನೀರು, ಗಾಳಿ ಮತ್ತು ಬೆಳಕುಗಳನ್ನು ಬಳಸಲು ಪ್ರತಿಯೊಬ್ಬರಿಗೂ ಹಕ್ಕುಂಟು ಎಂದು ಅಂಬೇಡ್ಕರ್ ಹೇಳಿದರು. ಈ ಹೋರಾಟವು ಅಂಬೇಡ್ಕರರನ್ನು ಏಕೈಕ ದಲಿತರನ್ನಾಗಿಸಿತು.
೪. ನಾಸಿಕ್ ಸತ್ಯಾಗ್ರಹ :-
ನಾಸಿಕ್ ನ ಕಲಾರಾಮ ದೇವಾಲಯಕ್ಕೆ ದಲಿತರ ಪ್ರವೇಶವನ್ನು ನಿರಾಕರಿಸಲಾಗಿತ್ತು. ೧೯೩೦ರಲ್ಲಿ ೧೦,೦೦೦ ದಲಿತರೊಡನೆ ದೇವಾಲಯ ಪ್ರವೇಶಕ್ಕೆ ತಮ್ಮ ಜನಾಂಗದ ಹಕ್ಕು ಒತ್ತಾಯಿಸಿ ನಾಸಿಕ್ ಸತ್ಯಾಗ್ರಹ ಹೂಡಿದರು. ಒಂದು ತಿಂಗಳ ನಂತರ ದಲಿತರು ಮತ್ತು ಸವರ್ಣೀಯರ ಮಧ್ಯೆ ಒಪ್ಪಂದವಾಗಿ ದೇವಾಲಯದ ರಥವನ್ನು ಒಟ್ಟಾಗಿ ಎಳೆಯಲು ನಿರ್ಧರಿಸಿದರು. ಜೀತ ನಿರ್ಮೂಲನೆಗೆ ಶಾಸನ ಜಾರಿಗೆ ತಂದರು.
೫. ಅಮರಾವತಿ ಸತ್ಯಾಗ್ರಹ :-
ಇಲ್ಲಿನ ಅಂಬಾದೇವಿ ದೇವಾಲಯಕ್ಕೆ ದಲಿತರ ಪ್ರವೇಶ ಹಕ್ಕಿಗೆ ಒತ್ತಾಯಿಸಿ ೩ ತಿಂಗಳು ಕಾಲ ಸತ್ಯಾಗ್ರಹ ಹೂಡಿ ಯಶಸ್ವಿಯಾದರು. ಈ ಮಧ್ಯೆ ಅನೇಕ ದಲಿತರ ಸಮ್ಮೇಳನಗಳನ್ನು ಸಂಘಟಿಸಿದರು. ೧೯೩೦ ರಲ್ಲಿ ನೇಮಕವಾದ ಸ್ಟಾರ್ಟ್ ಸಮಿತಿ ದಲಿತರ ಉದ್ಧಾರಕ್ಕೆ ಮಂಡಿಸಿದ ವರದಿಗಳನ್ನು ಅಂಬೇಡ್ಕರರೇ ಸಿದ್ಧಪಡಿಸಿದ್ದರು.
೬. ದುಂಡು ಮೇಜಿನ ಸಮ್ಮೇಳನಗಳು :-
೧೯೩೦-೩೨ ರಲ್ಲಿ ಭಾರತದ ರಾಜ್ಯಾಂಗ ಸುಧಾರಣೆ ಕುರಿತು ಚರ್ಚಿಸಲು ೩ ದುಂಡು ಮೇಜಿನ ಸಮ್ಮೇಳನಗಳು ಲಂಡನ್ ನಲ್ಲಿ ನಡೆದವು. ಅಂಬೇಡ್ಕರ್ ದಲಿತರ ಪ್ರತಿನಿಧಿಯಾಗಿ ಇಲ್ಲಿ ಭಾಗವಹಿಸಿ ದಲಿತರಿಗೆ ಪ್ರಾಂತ್ಯ ಶಾಸಕಾಂಗಗಳಲ್ಲಿ ಪ್ರತ್ಯೇಕ ಮತಕ್ಷೇತ್ರ ಕೊಡುವಂತೆ ವಾದಿಸಿ ಜಯ ಪಡೆದರು.
೭. ಪೂನಾ ಒಪ್ಪಂದ :-
ದಲಿತರಿಗೆ ಬ್ರಿಟಿಷರು ಕೊಟ್ಟ ಪ್ರತ್ಯೇಕ ಮತಕ್ಷೇತ್ರವನ್ನು ವಿರೋಧಿಸಿ ಪೂನಾದ ಯರವಾಡ ಜೈಲಿನಲ್ಲಿ ಗಾಂಧೀಜಿ ೨೧ ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ಕೊನೆಗೆ ೧೯೩೨ ರ ಮೇ ನಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪೂನಾ ಒಪ್ಪಂದವಾಗಿ ಗಾಂಧೀಜಿ ಉಪವಾಸ ಕೈ ಬಿಟ್ಟರು. ಒಪ್ಪಂದದಂತೆ ದಲಿತರಿಗೆ ಕೊಟ್ಟ ಪ್ರತ್ಯೇಕ ಮತಕ್ಷೇತ್ರ ಕೈಬಿಟ್ಟು ಶಾಸಕಾಂಗಗಳಲ್ಲಿ ಅವರಿಗೆ ಮೀಸಲು ಸ್ಥಾನಗಳನ್ನು ೭೮ ರಿಂದ ೧೪೮ ಕ್ಕೆ ಏರಿಸಲಾಯಿತು. ಹೀಗೆ ಈ ಇಬ್ಬರು ಮಹಾನಾಯಕರು ಸೇರಿ ದಲಿತರು ಹಿಂದೂ ಧರ್ಮದಿಂದ ಪ್ರತ್ಯೇಕವಾಗುವುದನ್ನು ತಪ್ಪಿಸಿದರು.
೮. ಜನತಾ ಶಿಕ್ಷಣ ಸಂಸ್ಥೆ :-
೧೯೪೨ ರಲ್ಲಿ ಜನತಾ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿದರು. ಇದರ ವತಿಯಿಂದ ಬಾಂಬೆ ಸಿದ್ಧಾರ್ಥ ಕಾಲೇಜು, ಔರಂಗಾಬಾದ್ ನ ಮಿಲ್ಹಿಂದ ಕಾಲೇಜುಗಳು ಸ್ಥಾಪನೆಯಾದವು. ಈ ಸಂಸ್ಥೆ ದಲಿತರಿಗೆ ಶಿಕ್ಷಣ ನೀಡಿ ಅವರ ಉದ್ಧಾರಕ್ಕೆ ಬಹಳಷ್ಟು ಶ್ರಮಿಸಿತು. ಹೀಗೆ ಅವರು ಹಿಂದುಳಿದ ವರ್ಗಗಳ ವಿಮೋಚಕ ಎನಿಸಿಕೊಂಡರು.
೯. ಕಾರ್ಮಿಕ ಪಕ್ಷ:-
ಅಂಬೇಡ್ಕರ್ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿ ಲಕ್ಷಾಂತರ ಕಾರ್ಮಿಕರನ್ನು ಸಂಘಟಿಸಿದರು. ಇದು ಮುಂದೆ ಅಖಿಲ ಭಾರತ ಪರಿಶಿಷ್ಟ ಜಾತಿ ಫೆಡರೇಶನ್ ಆಯಿತು. ಹೀಗೆ ಅವರು ದಲಿತನಾಯಕರಲ್ಲದೆ ಕಾರ್ಮಿಕ ನಾಯಕರೂ ಆಗಿದ್ದರು. ಅವರು ರಿಪಬ್ಲಿಕ್ ಪಕ್ಷ ಕಟ್ಟಿದರು. ಶಿಕ್ಷಣ, ಸಂಘಟನೆ, ಹೋರಾಟ ಇವು ಮೂರು ದಲಿತರ ಏಳಿಗೆಗೆ ಅತ್ಯಗತ್ಯ.
೧೦. ಸಂವಿಧಾನ ರಚನೆ :-
ಅಂಬೇಡ್ಕರ್ ರು ಭಾರತದ ಸಂವಿಧಾನ ಶಿಲ್ಪಿ. ಅದನ್ನು ಪೂರ್ಣವಾಗಿ ರಚಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಅವರು ನಮ್ಮ ರಾಜ್ಯಾಂಗದ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ದಲಿತರಿಗೆ ರಾಜ್ಯಾಧಿಕಾರ ದೊರೆಯದ ಹೊರತು ಅವರ ಉದ್ಧಾರ ಸಾಧ್ಯವಿಲ್ಲ ಎಂದು ನಂಬಿದ್ದ ಅಂಬೇಡ್ಕರ್ ಈ ಅವಕಾಶವನ್ನು ಬಳಸಿಕೊಂಡು ದಲಿತರಿಗೆ ಶಾಸಕಾಂಗ ಹಾಗೂ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಸಂವಿಧಾನದ ಮೂಲಕ ಕಲ್ಪಿಸಿದರು. ೧೯೫೫ ರಲ್ಲಿ ಅಸ್ಪೃಶ್ಯತೆ ನಿವಾರಣೆಾ ಕಾಯ್ದೆ ಜಾರಿಗೆ ತಂದರು.
೧೧. ಹಿಂದೂ ಕೋಡ್ ಬಿಲ್ :-
ಅಂಬೇಡ್ಕರ್ ಸ್ವತಂತ್ರ ಭಾರತದ ಪ್ರಪ್ರಥಮ
ಕಾನೂನು ಮಂತ್ರಿಯಾಗಿದ್ದರು.ಆಗ ಅವರು ಸಂಸತ್ತಿನಲ್ಲಿ ಮಹಿಳೆಯರಿಗೆ ಸಮಾನತೆ ಪ್ರತಿಪಾದಿಸುವ '' ಹಿಂದೂ ಕೋಡ್ ಬಿಲನ್ನು" ಮಂಡಿಸಿದರು. ಆದರೆ ಸವರ್ಣೀಯರ ವಿರೋಧದಿಂದ ಅದು ಜಾರಿಗೆ ಬರಲಿಲ್ಲ. ಇದಕ್ಕಾಗಿ ನೊಂದ ಅಂಬೇಡ್ಕರ್ ಮಂತ್ರಿ ಪದವಿ ತ್ಯಜಿಸಿದರು. ಮತ್ತು ಬಹಿರಂಗ ಸಭೆಯಲ್ಲಿ ಅಸಾಮಾನತೆ ಭೋದಿಸುವ ಮನು ಧರ್ಮ ಗ್ರಂಥವನ್ನು ಸುಟ್ಟು ಹಾಕಿದರು. ಹೀಗಾಗಿ ಅವರನ್ನು" ಅಭಿನವ ಮನು" ಎಂದು ಕರೆಯಲಾಗಿದೆ. ಅವರು ಅಸ್ಪೃಶ್ಯತೆ ನಿವಾರಣೆ ಕಾಯ್ದೆಯನ್ನು ೧೯೫೫ ರಲ್ಲಿ ಜಾರಿಗೆ ತಂದರು. ಅಂಬೇಡ್ಕರ್ ರನ್ನು ಮಾರ್ಟಿನ್ ಲೂಥರ್ ಎಂದು ಕರೆಯಲಾಗಿದೆ
೧೨. ಕೃತಿಗಳು :-
ಬುದ್ಧ ಹಾಗೂ ಬೌದ್ಧ ಧರ್ಮ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗೆ ಏನು ಮಾಡಿದರು?, ಶೂದ್ರರು ಯಾರು?, ತಾಟ್ಸ್ ಆಫ್ ಪಾಕಿಸ್ತಾನ, ಜಾತಿ ವಿಷ್ಲೇಷಣೆ, ರೂಪಾಯಿ ಸಮಸ್ಯೆ ಇವು ಅಂಬೇಡ್ಕರರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು.
ಪ್ರಶಸ್ತಿಗಳು :-
೧೯೫೨ ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಇವರಿಗೆ ಗೌರವ ಡಿ.ಎಲ್. ಪದವಿ ನೀಡಿತು. ಆಂಧ್ರದ ಉಸ್ಮಾನಿಯಾ ವಿಶ್ವವಿದ್ಯಾಲಯ ಗೌರವ ಡಿ. ಲಿಟ್, ಪದವಿ ನೀಡಿತು. ಭಾರತ ಸರ್ಕಾರ ಅಂಬೇಡ್ಕರ್ ರವರಿಗೆ ೧೯೮೯ ರಲ್ಲಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.
No comments:
Post a Comment