Saturday, 21 April 2018

ಕೆಲವು ಪ್ರಮುಖ ಖನಿಜಗಳ ವಿವರ:-

೧. ಕಬ್ಬಿಣದ ಅದಿರು:-
             ಜಗತ್ತಿನಲ್ಲಿ ಅತೀ ಹೆಚ್ಚು ಕಬ್ಬಿಣದ ಅದಿರು ಲಭ್ಯವಿರುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ ಲಭ್ಯವಿದೆ. ಮೊದಲನೇ ಸ್ಥಾನ ಬ್ರೆಜಿಲ್ ದೇಶದ್ದು. ಭಾರತದಲ್ಲಿ ಜಗತ್ತಿನ ಕಬ್ಬಿಣದ ಒಟ್ಟು ನಿಕ್ಷೇಪದ ಶೇಕಡಾ ೭ ರಷ್ಟಿದೆ. ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತಕ್ಕೆ ಒಂಬತ್ತನೆಯ ಸ್ಥಾನ ಲಭ್ಯವಿದೆ.

೨. ಮ್ಯಾಂಗನೀಸ್:-
                 ಮ್ಯಾಂಗನೀಸ್ ಉತ್ಪಾದನೆಯಲ್ಲಿ
ಭಾರತಕ್ಕೆ ರಷ್ಯಾ ಮತ್ತು ಆಫ್ರಿಕಾಗಳ ನಂತರ ಮೂರನೇ ಸ್ಥಾನ ಲಭ್ಯವಿದೆ. ೧೯೯೯-೨೦೦೦ ರಲ್ಲಿ ೧೫.೧೪ ಲಕ್ಷ ಟನ್ನುಗಳಷ್ಟು ಮ್ಯಾಂಗನೀಸನ್ನು ಉತ್ಪಾದಿಸಲಾಗಿತ್ತು. ಮ್ಯಾಂಗನೀಸ್ ಬಿಹಾರ, ಮಧ್ಯಪ್ರದೇಶ, ಒರಿಸ್ಸಾ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಲಭ್ಯವಿದೆ.

೩. ಅಭ್ರಕ:-
              ಕಾಗೆ ಬಂಗಾರ ಎಂದು ಪ್ರಸಿದ್ಧವಾಗಿರುವ ಅಭ್ರಕದ ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಜಗತ್ತಿನ ಒಟ್ಟು ಅಭ್ರಕದ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೮೦ರಷ್ಟಿದೆ.೧೯೯೯-೨೦೦೦ ರಲ್ಲಿ ೬೪.೮೯ ಲಕ್ಷ ಟನ್ನುಗಳಷ್ಟು ಅಭ್ರಕವನ್ನು ಉತ್ಪಾದಿಸಿತ್ತು.

೪. ಬಾಕ್ಸೈಟ್:-
               ಬಾಕ್ಸೈಟನ್ನು ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ೨೫ ಕೋಟಿ ಟನ್ನುಗಳಿಗೂ ಅಧಿಕ ಬಾಕ್ಸೈಟ್ ನಿಕ್ಷೇಪವಿದೆಯೆಂದು ಅಂದಾಜು ಮಾಡಲಾಗಿದ್ದು, ೧೯೯೯-೨೦೦೦ ರಲ್ಲಿ ೬೪.೮೯ ಲಕ್ಷ ಟನ್ನುಗಳಷ್ಟು ಬಾಕ್ಸೈಟ್ ಅದಿರನ್ನು ಉತ್ಪಾದಿಸಲಾಗಿತ್ತು.

೫. ಇಲ್ಮನೈಟ್:-
                ಇಲ್ಮನೈಟ್ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ ಲಭ್ಯವಿದೆ. ಈ ಖನಿಜ ಉಕ್ಕಿನ ಮತ್ತು ಬಣ್ಣದ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಈ ಖನಿಜ ಲಭ್ಯವಾಗುತ್ತದೆ.

೬. ಕ್ರೋಮೈಟ್:-
                ಭಾರತದಲ್ಲಿ ಕ್ರೋಮೈಟ್ ಹೇರಳ ಪ್ರಮಾಣದಲ್ಲಿ ದೊರೆಯುತ್ತಿದ್ದು ೧೯೯೯-೨೦೦೦ ರಲ್ಲಿ ೧೩.೨೪ ಲಕ್ಷ ಟನ್ನುಗಳಷ್ಟು ಉತ್ಪಾದನೆಯಾಗಿತ್ತು. ಉತ್ತಮ ದರ್ಜೆಯ ಉಕ್ಕಿನ ತಯಾರಕೆ, ಬಣ್ಣ, ಉಷ್ಣ ನಿರೋಧಕ ಇಟ್ಟಿಗೆಗಳ ತಯಾರಿಕೆಯಲ್ಲಿ ಕ್ರೋಮೈಟ್  ಬಳಸುತ್ತಾರೆ. ಕರ್ನಾಟಕ, ಬಿಹಾರ, ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕ್ರೋಮೈಟ್  ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.

೭. ಚಿನ್ನ:-
        ‌  ‌ಭಾರತ ಪ್ರಮುಖ ಚಿನ್ನದ ಉತ್ಪಾದನೆಯ ರಾಷ್ಟ್ರವೇನಲ್ಲ. ಭಾರತದಲ್ಲಿ ಚಿನ್ನದ ಅದಿರು ಕರ್ನಾಟಕ ರಾಜ್ಯದ ಕೋಲಾರದ ಊರಿಗಾಂ ( KGF) ಮತ್ತು ರಾಯಚೂರಿನ ಹಟ್ಟಿ ಚಿನ್ನದ ಗಣಿಗಳಲ್ಲಿ ಸಿಗುತ್ತಿದೆ. ಕರ್ನಾಟಕ ಇನ್ನೂ ಕೆಲವು ಕಡೆ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಚಿನ್ನದ ನಿಕ್ಷೇಪವಿದೆಯೆಂದು ಪತ್ತೆ ಹಚ್ಚಲಾಗಿದೆ. ೧೯೯೯-೨೦೦೦ ರಲ್ಲಿ ೨೨೪೭ ಕೆ.ಜಿ. ಚಿನ್ನವನ್ನು ಉತ್ಪಾದಿಸಲಾಗಿತ್ತು.

೮. ತಾಮ್ರ:-
             ಭಾರತ ಅತ್ಯಲ್ಪ ಪ್ರಮಾಣದಲ್ಲಿ ತಾಮ್ರವನ್ನು ಉತ್ಪಾದಿಸುತ್ತದೆ. ತಾಮ್ರ ಒಂದು ಬಹುಪಯೋಗಿ ಲೋಹ. ವಿದ್ಯುತ್ ಉಪಕರಣಗಳ ಕೈಗಾರಿಕೆಗಳಲ್ಲಿ ಇದು ವ್ಯಾಪಕವಾಗಿ ಬಳಸಲಾಗುತ್ತದೆ. ೧೯೯೯-೨೦೦೦ ರಲ್ಲಿ ಭಾರತ ೨೯.೭೬ ಲಕ್ಷ ಟನ್ನು ತಾಮ್ರದ ಅದಿರನ್ನು ಉತ್ಪಾದಿಸಿತ್ತು. ತಾಮ್ರದ ಅದಿರು ಮುಖ್ಯವಾಗಿ ಬಿಹಾರ, ರಾಜಸ್ಥಾನ, ರಾಜ್ಯಗಳಲ್ಲಿ ದೊರೆಯುತ್ತದೆ. ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲೂ ಅಲ್ಪ ಪ್ರಮಾಣದ ತಾಮ್ರ ದೊರೆಯುತ್ತದೆ.

No comments:

Post a Comment