Thursday, 5 April 2018

ಸ್ವಾಮಿ ವಿವೇಕಾನಂದರು:-

ಸ್ವಾಮಿ ವಿವೇಕಾನಂದರು :-
              ಜಗತ್ತಿಗೆ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಶ್ರೇಷ್ಠತೆಯನ್ನು ಮನವರಿಕೆ ಮಾಡಿದ ಮೊಟ್ಟ ಮೊದಲ ಭಾರತದ 'ಆಧ್ಯಾತ್ಮಿಕ ದಿವ್ಯಪುರುಷ'  ಸ್ವಾಮಿ ವಿವೇಕಾನಂದರು. ಇವರ ಆರಂಭದ ಹೆಸರು ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ. ಒಬ್ಬ ಪ್ರಸಿದ್ಧ ವಕೀಲರು. ತಾಯಿ ಭುವನೇಶ್ವರಿ ಆಧ್ಯಾತ್ಮಿಕ ಸಂಪನ್ನಳು. ನರೇಂದ್ರರು ಜನವರಿ ೧೨,೧೮೬೩ ರಂದು ಕಲ್ಕತ್ತಾದಲ್ಲಿ ಜನಿಸಿದರು. ಅವರು ಕಲ್ಕತ್ತದ ಮಿಷನ್ ಕಾಲೇಜಿನಲ್ಲಿ ಓದಿ ತತ್ವಶಾಸ್ತ್ರದಲ್ಲಿ ಪದವಿ ಪಡೆದರು. ನರೇಂದ್ರರು ಹಿಂದೂ ಧರ್ಮ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ ತೀವ್ರ ಆಧ್ಯಾತ್ಮಿಕತೆಯನ್ನು ರೂಢಿಸಿಕೊಂಡರು. ನಂತರ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಅವರಿಂದ ಸಕಲ ವಿದ್ಯೆ ಮತ್ತು ಆಶೀರ್ವಾದ ಪಡೆದು ಸನ್ಯಾಸಿಯಾದರು. ರಾಮಕೃಷ್ಣರು ಕಲ್ಕತ್ತಾದ ದಕ್ಷಿಣೇಶ್ವರ ದೇವಾಲಯದ ಬ್ರಾಹ್ಮಣ ಅರ್ಚಕರು. ಅವರು ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದು ಆಧ್ಯಾತ್ಮಿಕ ಉನ್ನತಿ ಪಡೆದವರು ಆಗಿದ್ದರು. ಪರಮಹಂಸರ ಶಿಷ್ಯರಲ್ಲಿ ಸ್ವಾಮಿ ವಿವೇಕಾನಂದರು ಅಗ್ರಗಣ್ಯರು.

ಚಿಕಾಗೋ ವಿಶ್ವ ಧರ್ಮ ಸಮ್ಮೇಳನ:-
                ವಿವೇಕಾನಂದರು ಮೇ ೩೧,೧೮೯೩ ರಂದು ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಲ್ಲಿ ಮಾತನಾಡಿ ಹಿಂದೂ ಧರ್ಮ, ಸಂಸ್ಕೃತಿ ಮತ್ತು ನಾಗರೀಕತೆಗಳ ಶ್ರೇಷ್ಠತೆಯನ್ನು ಪಾಶ್ಚಿಮಾತ್ಯ ದೇಶಗಳಿಗೆ ಸಾರಿ ಹೇಳಿದರು. ಅಮೇರಿಕ ಮತ್ತು ಯೂರೋಪ್ ರಾಷ್ಟ್ರಗಳು ಹಿಂದೂಧರ್ಮ ಮತ್ತು ಸಂಸ್ಕೃತಿಯನ್ನು ಒಪ್ಪುವಂತೆ ಮಾಡಿದರು. ಅವರು ವೇದಾಂತದ ಮಹಿಮೆ ಕುರಿತು ಒತ್ತಿ ಹೇಳಿದರು. "ಭಾರತದ ಮಣ್ಣೇ ನನಗೆ ಪವಿತ್ರ, ಅದರ ಗಾಳಿಯೇ ನನಗೆ ಪವಿತ್ರ, ಅದೇ ನನ್ನ ತೀರ್ಥಕ್ಷೇತ್ರ, ಮಾತೃಭೂಮಿ. ಆ ದೇವರೇ ನನ್ನ ದೇವರು" ಎಂದು ಹೇಳಿದರು. ಜೊತೆಗೆ ಪಾಶ್ಚಿಮಾತ್ಯ ಭೌತಿಕ ನಾಗರೀಕತೆಯನ್ನು ಟೀಕಿಸಿದರು. ವಿಶ್ವಸೋದರತೆ, ಮತಸಹಿಷ್ಣತೆ ಮತ್ತು ಸಹಬಾಳ್ವೆಗಳ ಮಹತ್ವವನ್ನು ಒತ್ತಿ ಹೇಳಿದರು. ಈ ಕುರಿತು "ಭಾರತದಂತಹ ಪ್ರಜ್ಞಾವಂತ ದೇಶಕ್ಕೆ ಧರ್ಮ ಪ್ರಚಾರಕರನ್ನು ಕಳುಹಿಸಿದ್ದು ನಮ್ಮ ಮೂರ್ಖತನ, ನಾವು ನಮ್ಮ ಧಾರ್ಮಿಕ ಮಡಿವಂತಿಕೆಯನ್ನು ತೋರ್ಪಡಿಸಲು ಸಭೆ ನಡೆಸಿದಂತಿದೆ. ಈ ವೀರ ಸನ್ಯಾಸಿಗೆ ನಾವು ತಲೆ ಬಾಗಿದ್ದೇವೆ" ಎಂದು ನ್ಯೂಯಾರ್ಕ್ ಹೆರಾಲ್ಡ್ ಪತ್ರಿಕೆ ಬರೆಯಿತು. ಸ್ವಾಮೀಜಿ ನ್ಯೂಯಾರ್ಕ್ ನಲ್ಲಿ ಒಂದು ವೇದಾಂತ ಸಮಾಜವನ್ನು ಸ್ಥಾಪಿಸಿದರು. ನಂತರ ಪ್ಯಾರಿಸ್ ಸರ್ವಧರ್ಮಗಳ ಇತಿಹಾಸ ಸಮ್ಮೇಳನದಲ್ಲಿ ಭಾಗವಹಿಸಿದರು. ಅಮೇರಿಕದಲ್ಲಿ ರಾಮಕೃಷ್ಣಮಠ ಶಾಖೆಗಳಿವೆ. ಕನ್ಯಾಕುಮಾರಿಯಲ್ಲಿ ವಿವೇಕಾನಂದರ ಧ್ಯಾನ ಸ್ಮಾರಕ ಭವನವಿದೆ.

ರಾಮಕೃಷ್ಣ ಮಿಷನ್ :-
               ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣರ ಸಂದೇಶವನ್ನು ಪ್ರಚಾರ ಮಾಡಲು ಗುರುವಿನ ನೆನಪಿಗಾಗಿ ೧೮೯೭ ರಲ್ಲಿ ಕಲ್ಕತ್ತಾ ಬಳಿಯ ಬೇಲೂರಿನಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಿದರು. ಇದಕ ಮತ್ತೊಂದು ಶಾಖೆ ಮಾಯಾವತಿಯಲ್ಲಿದೆ. ದೇಶ ವಿದೇಶಗಳಲ್ಲಿ ಇದರ ನೂರಾರು ಶಾಖೆಗಳು ಸ್ಥಾಪನೆಯಾದವು. ಇದರಡಿಯಲ್ಲಿ ಸ್ವಾಮಿಗಳು ಬಡತನ, ಅನಕ್ಷರತೆ ಮತ್ತು ಜಾತೀಯತೆಗಳ ನಿರ್ಮೂಲನೆಗೆ ಶ್ರಮಿಸಿದರು. ಅವರು ವಿಶ್ವಭ್ರಾತೃತ್ವ, ಏಕೀಶ್ವರತೆ ಮತ್ತು ಸ್ತ್ರೀ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದರು. ಇದರ ತತ್ವಗಳು ಇಂತಿವೆ.

೧. ರಾಮಕೃಷ್ಣ ಮಠ ಜಾತಿಪದ್ಧತಿಯನ್ನು ಖಂಡಿಸಿತು. ಮೂಢನಂಬಿಕೆಗಳನ್ನು ಮತ್ತು ಅರ್ಥವಿಲ್ಲದ ಆಚರಣೆಗಳನ್ನು ವಿರೋಧಿಸಿತು. ಅಸ್ಪೃಶ್ಯತೆ ವಿರುದ್ಧ ಪ್ರಚಾರ ಮಾಡಿತು.

೨.  ಸರ್ವಧರ್ಮ ಸಮನ್ವಯತೆ ಅದರ ಸಾರ. ಜಾತಿ ಮತ್ತು ಧರ್ಮಗಳ ಭೇದ ಭಾವನೆ ರಾಮಕೃಷ್ಣ ಮಠಕ್ಕೆ ಇಲ್ಲ. ವಿಶ್ವಸೋದರತೆಯನ್ನು ಅದು ಎತ್ತಿ ಹಿಡಿಯಿತು.

೩.  ದೇವರು ಒಬ್ಬನೇ. ಅಂತೆಯೇ ಎಲ್ಲಾ ಧರ್ಮಗಳು ಒಂದೇ. ಅವು ದೇವರನ್ನು ಕಾಣುವ ವಿವಿಧ ಮಾರ್ಗಗಳು. ಪ್ರತಿಯೊಬ್ಬನಲ್ಲೂ ದೇವರು ಅಡಗಿದ್ದಾನೆ. ಜನಸೇವೆಯೇ ಜನಾರ್ದನ ಸೇವೆ. ರಾಮಕೃಷ್ಣ ಮಠ ಅನೇಕ ಶಾಲಾಕಾಲೇಜು, ಅನಾಥಾಲಯ ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸಿ ದೀನ ದಲಿತರ ಸೇವೆ ಮಾಡಿತು. ಬರಗಾಲ, ನೆರೆಹಾವಳಿ, ಭೂಕಂಪ, ರೋಗ ರುಜಿನ ಮತ್ತು ಕ್ಷಾಮ ಪರಿಹಾರ ಕಾರ್ಯದಲ್ಲಿ ತೊಡಗಿ ಲಕ್ಷಾಂತರ ಜನತೆಯ ಬಾಳಿಗೆ ಆಶಾಕಿರಣವಾಯಿತು. ಅದರ ಜನಪ್ರಿಯತೆಗೆ ಇದೇ ಮುಖ್ಯ ಕಾರಣ.

೪.   ರಾಮಕೃಷ್ಣ ಮಠವು ಭಾರತದ ತತ್ವಜ್ಞಾನ ಮತ್ತು ನಾಗರೀಕತೆ ಜಗತ್ತಿನಲೇ ಶ್ರೇಷ್ಠವೆಂದು ಪರಿಗಣಿಸಿತು. ಹೀಗಾಗಿ ಅದು ಸನಾತನ ಹಿಂದೂ ಧರ್ಮ ಪುನರುತ್ಥಾನಕ್ಕಾಗಿ ಶ್ರಮಿಸಿತು. ವೇದಾಂತ ತತ್ವಗಳ ಶ್ರೇಷ್ಠತೆಯನ್ನು ಪ್ರತಿಪಾದಿಸಿತು. ಪಾಶ್ಚಿಮಾತ್ಯ ಭೌತಿಕ ನಾಗರೀಕತೆಯನ್ನು ಖಂಡಿಸಿತು. ಸ್ವಾಮಿಗಳು ಆಧುನಿಕ ವೇದಾಂತ ಪ್ರವಾದಿ ಎಂದು ಜಗತ್ ಪ್ರಸಿದ್ಧಿಯಾದರು.

೫.  ಅದು ವ್ಯಕ್ತಿಯ ಮುಕ್ತಿಗಿಂತ ಸಾಮಾಜಿಕ ಉನ್ನತಿಗೆ ಹೆಚ್ಚಿನ ಗಮನ ಕೊಡುತ್ತದೆ.

೬.  ಅದು ಸ್ತ್ರೀ ಶಿಕ್ಷಣವನ್ನು ಬಲವಾಗಿ ಸಮರ್ಥಿಸಿತು. ಯಾವ ಸಮಾಜ ಸ್ತ್ರೀಯನ್ನು ಗೌರವಿಸುತ್ತದೋ ಅದು ಸಮೃದ್ಧಿಯಾಗುತ್ತದೆ ಎಂದಿತು. ಇದಕ್ಕಾಗಿ ಸ್ವಾಮಿಗಳು 'ಪ್ರಬುದ್ಧ ಭಾರತ' ಮತ್ತು 'ಉದ್ಬೋದನ' ಎಂಬ ಪತ್ರಿಕೆಗಳನ್ನು ಹೊರಡಿಸಿದರು.

ಯುವಕರಿಗೆ ವಿವೇಕಾನಂದರ ಸಂದೇಶ :-
              "ವೇದ ಧರ್ಮವೇ ಶ್ರೇಷ್ಠ. ಉಪನಿಷತ್ತ್, ವೇದಗಳ ಆದರ್ಶಗಳನ್ನು ಪಾಲಿಸಿ. ಗೀತೆ ಮತ್ತು ಯೋಗಗಳನ್ನು ಅನುಸರಿಸಿ. ಕಪಿಗಳಂತೆ ಪಾಶ್ಚಿಮಾತ್ಯ ನಾಗರೀಕತೆಯನ್ನು ಅನುಸರಿಸಬೇಡಿ. ಕಾರಣ ಭಾರತ ಜಗತ್ತಿನ ಆಧ್ಯಾತ್ಮಿಕ ಒಡೆಯ. ದೌರ್ಬಲ್ಯವನ್ನು ಕಿತ್ತೊಗೆಯಿರಿ. ಅದೇ ಶಾಪ, ಮೃತ್ಯು ಮತ್ತು ಸರ್ವನಾಶ. ಮೂಢನಂಬಿಕೆಗಳಿಗೆ ಬಲಿಯಾಗಬೇಡಿ. ಅಜ್ಞಾನವನ್ನು ಕಿತ್ತೊಗೆಯಿರಿ. ಎಲ್ಲರೂ ವಿದ್ಯಾವಂತರಾಗಿ. ಸಮತಾವಾದ, ವ್ಯಕ್ತಿಸ್ವಾತಂತ್ರ ಮತ್ತು ಕಾರ್ಯ ತತ್ಪರತೆಯಲ್ಲಿ ಯೂರೋಪಿಯನ್ನರನ್ನು ಮೀರಿ. ಆದರೆ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಭಾರತೀಯರಾಗಿರಿ. ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. " ಇತ್ಯಾದಿ. ಭಾರತೀಯರು ವಿವೇಕಾನಂದರನ್ನು 'ಭಾರತದ ದೇಶಭಕ್ತಸಂತ', 'ವೇದಾಂತ ಕೇಸರಿ' ಎಂದು ಕರೆದು ಗೌರವಿಸಿದ್ದಾರೆ. ಸ್ವಾಮಿಗಳ ಮರಣ ಜುಲೈ ೪,೧೯೦೨ ರಂದಾಯಿತು.

No comments:

Post a Comment