Tuesday, 3 April 2018

ಭಾರತದ ಆರ್ಥಿಕತೆ:-

ಭಾರತದ ಆರ್ಥಿಕ ವ್ಯವಸ್ಥೆಯ ಲಕ್ಷಣಗಳು :-
               ಈಗ ತಾನೇ ಅಭಿವೃದ್ಧಿ ಪಥದಲ್ಲಿ ಸಾಗತೊಡಗಿರುವ ಭಾರತ ಒಂದು ಅಭಿವೃದ್ಧಿಶೀಲ ದೇಶವೆಂದು ಪರಿಗಣಿಸಲ್ಪಟ್ಟಿದೆ. ವಿಶ್ವ ಆರ್ಥಿಕ ರಚನೆಯಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿರುವ ಭಾರತ ನೈಸರ್ಗಿಕವಾಗಿ ಒಂದು ಸಂಪದ್ಭರಿತ ದೇಶವಾಗಿದ್ದು ಅದು ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ಅವುಗಳು ಮುಂದಿನಂತಿವೆ.

೧. ಕೃಷಿ ಪ್ರಾಧಾನ್ಯತೆ:-
                ಭಾರತದ ಒಂದು ಕೃಷಿ ಪ್ರಧಾನ ದೇಶವಾಗಿದ್ದು ಶೇಕಡಾ ೬೫ ಕ್ಕಿಂತಲೂ ಅಧಿಕ ಸಂಖ್ಯೆಯ ಜನ ಕೃಷಿ ಕಸುಬನ್ನೇ ಅವಲಂಬಿಸಿದವರಾಗಿದ್ದಾರೆ. ಆದರೆ ಮುಂದುವರಿದ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿ ತುಂಬಾ ವ್ಯತಿರಿಕ್ತವಾಗಿದೆ. ಅಮೇರಿಕದಲ್ಲಿ ಶೇಕಡಾ ೨, ಇಂಗ್ಲೆಂಡ್ ನಲ್ಲಿ ಶೇಕಡಾ ೨, ಕೆನಡಾದಲ್ಲಿ ಶೇಕಡಾ ೫, ಫ್ರಾನ್ಸನಲ್ಲಿ ಶೇಕಡಾ ೮ ಮತ್ತು ಜಪಾನ್ ದಲ್ಲಿ ಶೇಕಡಾ ೫ ರಷ್ಟು ಜನರು ಮಾತ್ರ ಕೃಷಿಯನ್ನು ಅವಲಂಬಿಸಿದ್ದಾರೆ.

೨. ಕಡಿಮೆ ತಲಾದಾಯ:-
                   ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ತಲಾದಾಯ ತುಂಬಾ ಕಡಿಮೆ ಇದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದ ತಲಾದಾಯ ೨೩,೨೨೨ (೨೦೦೪-೦೫) ರೂಪಾಯಿಗಳಾಗಿದೆ.

೩. ಕಡಿಮೆ ಜೀವನ ಮಟ್ಟ :-
                ಭಾರತೀಯರ ತಲಾದಾಯ ತುಂಬಾ ಕಡಿಮೆ ಇದೆ. ಆದಾಯ ಮತ್ತು ಸಂಪತ್ತು ಕೆಲವೇ ಕೆಲವು ಜನರ ಬಳಿ ಕೇಂದ್ರೀಕೃತವಾಗಿದ್ದು ಶೇಕಡಾ ೨೬ ಕ್ಕಿಂತಲೂ ಅಧಿಕ ಜನ ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದಾರೆ.

೪. ಜನಸಂಖ್ಯೆಯ ತೀವ್ರ ಬೆಳವಣಿಗೆ :-
               ಭಾರತದ ಜನಸಂಖ್ಯೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ೨೦೦೧ ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ ೧೦೨ ಕೋಟಿಗಿಂತಲೂ ಅಧಿಕ. ಜನಸಂಖ್ಯೆಯ ಗಾತ್ರದಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಬೃಹತ್ ರಾಷ್ಟ್ರದ ಸ್ಥಾನ ಪಡೆದಿದೆ.

೫. ವ್ಯಾಪಕ ಬಡತನ :-
                  ಬಡತನ ದೇಶ ಎದುರಿಸುತ್ತಿರುವ ಒಂದು ಗಂಭೀರ ಸಮಸ್ಯೆಯಾಗಿದೆ. ಶೇಕಡಾ ೨೬ ಕ್ಕಿ೦ತಲೂ ಅಧಿಕ ಸಂಖ್ಯೆಯ ಜನ ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದು ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

೬. ನಿರುದ್ಯೋಗ ಮತ್ತು ಅರೆ ಉದ್ಯೋಗ :-
            ನಿರುದ್ಯೋಗ ಮತ್ತು ಅರೆ ಉದ್ಯೋಗ ಸಮಸ್ಯೆಗಳು ಭಾರತ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ದೇಶದಲ್ಲಿ ೧೯೫೦-೫೧ ರಲ್ಲಿ ೩.೩ ದಶಲಕ್ಷ ಜನರು, ೧೯೮೫ ರಲ್ಲಿ ೧೪ ದಶಲಕ್ಷ  ಹಾಗೂ ೧೯೯೯-೦೦ ರಲ್ಲಿ ೨೬.೫೮ ದಶಲಕ್ಷ ಜನ ನಿರುದ್ಯೋಗಿಗಳಿದ್ದರೆಂದು ಅಂದಾಜು ಮಾಡಲಾಗಿದೆ.

೭. ಬಂಡವಾಳ ಕೊರತೆ :-
            ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಬಂಡವಾಳದ ಕೊರತೆಯೂ ಒಂದಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಉಳಿತಾಯದ ಪ್ರಮಾಣ ಸರಿ ಸುಮಾರು ಶೇಕಡಾ ೩೦.೧ ರಷ್ಟಿದೆ. ಆದರೆ ಮುಂದುವರಿದ ದೇಶಗಳಲ್ಲಿ ಈ ಪ್ರಮಾಣ ಶೇಕಡಾ ೩೫ ಕ್ಕಿ೦ತಲೂ ಅಧಿಕವಿದೆ. ಬಂಡವಾಳದ ಕೊರತೆ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ.

೮. ತಾಂತ್ರಿಕ ಹಿಂದುಳಿದಿರುವಿಕೆ:-
               ಭಾರತ ತಾಂತ್ರಿಕವಾಗಿ ಹಿಂದುಳಿದಿದೆ ಹಾಗೂ ತಾಂತ್ರಿಕ ಜ್ಞಾನದ ಅಭಾವವಿದೆ. ಶೇಕಡಾ ೩೩ರಷ್ಟು ಜನರು ನಿರಕ್ಷರಸ್ಥರಿರುವ ಭಾರತದಲ್ಲಿ ತಾಂತ್ರಿಕ ಹಿಂದುಳಿದಿರುವಿಕೆ ಅಭಿವೃದ್ಧಿಯನ್ನು ತಡೆಹಿಡಿಯುತ್ತಿದೆ.

೯.ಉದ್ಯಮಶೀಲರ ಕೊರತೆ :-
               ಭಾರತ ಸಾಹಸಿ ಉದ್ಯಮಶೀಲರ ಕೊರತೆಯನ್ನು ಅನುಭವಿಸುತ್ತಿರುವ ದೇಶವಾಗಿದೆ. ಗಂಡಾಂತರಗಳನ್ನು ಎದುರಿಸಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗುವ ಉದ್ಯಮಶೀಲರ ಕೊರತೆಯಿಂದಾಗಿ ದೇಶ ಹಿಂದುಳಿಯಬೇಕಾಗಿ ಬಂದಿದೆ.

೧೦. ಬಳಕೆಯಾಗದಿರುವ ಸಂಪನ್ಮೂಲಗಳ ಅಸ್ತಿತ್ವ :-
            ಭಾರತ ಮೂಲಕ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ದೇಶ. ಆದರೆ ಬಂಡವಾಳಗ ಕೊರತೆ, ತಾಂತ್ರಿಕ ಹಿಂದುಳಿದಿರುವಿಕೆ, ಅದಕ್ಷ ಆಡಳಿತ ಹಾಗೂ ಇನ್ನೂ ಮುಂತಾದ ಕಾರಣಗಳಿಂದಾಗಿ ಬಳಕೆಯಾಗದ ಸಂಪನ್ಮೂಲಗಳು ಹೇರಳವಾಗಿ ಅಸ್ತಿತ್ವದಲ್ಲಿವೆ.

೧೧. ಸಾರಿಗೆ - ಸಂಪರ್ಕ ವ್ಯವಸ್ಥೆಯ ಕೊರತೆ :-
                 ಸಾರಿಗೆ - ಸಂಪರ್ಕ ವ್ಯವಸ್ಥೆ ಒಂದು ಆರ್ಥಿಕತೆಯ ನರನಾಡಿಗಳಿದ್ದಂತೆ, ಆದರೆ ಭಾರತದಲ್ಲಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ಇನ್ನೂ ಸರಿಯಾಗಿ ಅಭಿವೃದ್ಧಿಗೊಂಡಿಲ್ಲ.

೧೨. ಮಿಶ್ರ ಆರ್ಥಿಕ ವ್ಯವಸ್ಥೆ :-
                  ಭಾರತ ಒಂದು ಮಿಶ್ರ ಆರ್ಥಿಕ ವ್ಯವಸ್ಥೆಯಾಗಿದೆ. ಇದು ಬಂಡವಾಳಶಾಹಿ ಮತ್ತು ಸಮಾಜವಾದಿ ಆರ್ಥಿಕ ವ್ಯವಸ್ಥೆಗಳ ಉತ್ತಮಾಂಶಗಳ ಸಮ್ಮಿಶ್ರಣವಾಗಿದೆ.

೧೩. ಕಾರ್ಮಿಕ ಅದಕ್ಷತೆ:-
                ಭಾರತದಲ್ಲಿ ಕಾರ್ಮಿಕರ ದಕ್ಷತೆ ತೀರಾ ಕೆಳಮಟ್ಟದಲ್ಲಿದೆ. ಶಿಕ್ಷಣ, ತರಬೇತಿ, ಸಂಶೋಧನೆ, ಆರೋಗ್ಯ, ನೈರ್ಮಲ್ಯ ಮುಂತಾದ ಸೌಕರ್ಯಗಳ ಕೊರತೆಯಿಂದಾಗಿ ಕಾರ್ಮಿಕರ ದಕ್ಷತೆ ಮತ್ತು ಉತ್ಪಾದನಾ ಸಾಮರ್ಥ್ಯ ತುಂಬಾ ಕಡಿಮೆ ಇದೆ.

೧೪. ಅದಕ್ಷ ಆಡಳಿತ :-
                ಭಾರತದ ಆಡಳಿತ ವ್ಯವಸ್ಥೆ ದಕ್ಷವಾಗಿಲ್ಲ. ಸ್ವಜನ ಪಕ್ಷಪಾತ, ಲಂಚಗುಳಿತನ, ಭ್ರಷ್ಟಾಚಾರ, ವಿಳಂಬಗಳು ಭಾರತದ ಆಡಳಿತ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿವೆ. ಆಡಳಿತದಲ್ಲಿ ಬಿಗಿ ಹಿಡಿತವಿಲ್ಲ.

೧೫. ಪರಿಸರ ವಿನಾಶ:-
               ಭಾರತದಲ್ಲಿ ಪರಿಸರ ವಿನಾಶ ಅವ್ಯಾವಹತವಾಗಿ ನಡೆಯುತ್ತಿದೆ. ವಿವೇಚನಾ ರಹಿತ ಕಾಡು ಕಡಿತದಿಂದಾಗಿ ಭಾರತದಲ್ಲಿ ಪರಿಸರ ಅಸಮತೋಲನ ಸಮಸ್ಯೆ ತಲೆದೋರಿದೆ.

೧೬. ಕೆಲವು ಆರ್ಥಿಕ ಸಂಸ್ಥೆಗಳ ಕೊರತೆ :-
                  ಭಾರತದಲ್ಲಿ ಕೆಲವು ಆರ್ಥಿಕ ಸಂಸ್ಥೆಗಳು ಸರಿಯಾಗಿ ಬೆಳವಣಿಗೆ ಹೊಂದಿಲ್ಲ. ಬ್ಯಾಂಕುಗಳು, ವಿಮಾ ಕಂಪೆನಿಗಳು, ಸಹಕಾರಿ ಸಂಘಗಳು, ಹಣಕಾಸಿನ ಸಂಸ್ಥೆಗಳು, ಬಂಡವಾಳ ಮಾರುಕಟ್ಟೆ ಮುಂತಾದವುಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಗೊಂಡಿಲ್ಲ.

೧೭. ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆ :-
          ಭಾರತ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದೆ.

೧೮. ಬಡತನ ವಿಷವೃತ್ತ:-
             ಭಾರತದ ಆರ್ಥಿಕ ವ್ಯವಸ್ಥೆ ಬಡತನದ ವಿಷವೃತ್ತದಲ್ಲಿ ಸಿಲುಕಿಕೊಂಡಿದೆ. ಈ ವಿಷವೃತ್ತದಿಂದ ಭಾರತ ಹೊರಬರಲಾರದಷ್ಟು ಜಟಿಲವಾಗಿದೆ.

೧೯. ವಿದೇಶಿ ವ್ಯಾಪಾರ ಅವಲಂಬನೆ:-
                ಭಾರತದ ಆರ್ಥಿಕತೆ ಹೆಚ್ಚಾಗಿ ವಿದೇಶಿ ವ್ಯಾಪಾರ ಅವಲಂಬಿತವಾಗಿರುವುದಾಗಿದೆ.

No comments:

Post a Comment