Tuesday, 10 April 2018

ಗಾದೆಮಾತು : ಬೀಜದಂತೆ ಕಾಯಿ, ನೂಲಿನಂತೆ ದಾರ

ಬೀಜದಂತೆ ಕಾಯಿ, ನೂಲಿನಂತೆ ದಾರ :-

            ವ್ಯವಸಾಯಕ್ಕೆ ಸಂಬಂಧಿಸಿದ ಗಾದೆ ಇದು.ಆದರೂ ಬಹುತೇಕ ಪ್ರಸಂಗಗಳಲ್ಲಿ ಈ ಗಾದೆ ಅನ್ವಯವಾಗುತ್ತದೆ. ಸಸ್ಯಗಳೂ ಎತ್ತರವಾಗಿ, ಗಿಡ್ಡವಾಗಿ, ದಪ್ಪವಾಗಿ ತೆಳುವಾಗಿ ಅಥವಾ ಅಗಲವಾಗಿ, ಚಿಕ್ಕವಾಗಿ ಹಾಗೂ ದೊಡ್ಡದಾಗಿ ಬೆಳೆಯಲು ಆ ಸಸ್ಯದ ಬೀಜದಲ್ಲಿರುವ ಅಂತಃಶಕ್ತಿಯೇ ಕಾರಣ. ಸಸ್ಯ, ಮರ ಮತ್ತು ಫಲಗಳು ಯಾವ ಆಕಾರದಲ್ಲಿರಬೇಕು, ಗಾತ್ರ ಹೇಗಿರಬೇಕು ಇತ್ಯಾದಿ ಗುಣಗಳು ಬೀಜದ ಸ್ವರೂಪವೇ ಆಗಿರುತ್ತದೆ. ಮತ್ತು ಅದೇ ಪ್ರಕಾರವಾಗಿ ಅವು ಬೆಳೆಯುತ್ತವೆ ವಿನಾ ಇದೇ ರೀತಿ ಬೆಳೆಯಬೇಕೆಂದು ನಾವು ನಿಬ೯ಂಧಿಸಲು ಆಗುವುದಿಲ್ಲ. ಉದಾಹರಣೆಗೆ ಬೇವಿನ ಬೀಜ ಬಿತ್ತಿ ನಾವು ಮಾವಿನ ಹಣ್ಣಿನಾಸೆ ಮಾಡುವಂತಿಲ್ಲ. ಅದರಂತೆ ನಿಂಬೆ ಬೀಜ ಬಿತ್ತಿ ಮಾವಿನ ಮರದಷ್ಟು ಅದು ಎತ್ತರ ಬೆಳೆಯಲಿ ಎಂದು ಆಶಿಸುವಂತಿಲ್ಲ. ಏಕೆಂದರೆ ನಿಂಬೆ ಬೀಜದ ಅಂತಸ್ಸತ್ವದಲ್ಲಿರುವ ಗುಣಗಳಿಗನುಸಾರವಾಗಿ ಮಾವಿನ ಮರ ಬೆಳೆದು ಫಲ ನೀಡುತ್ತದೆ. ಅಂತೆಯೇ ತಂದೆ, ತಾಯಿಗಳ ಗುಣ, ಬಣ್ಣ, ಎತ್ತರ ಮತ್ತು ಸ್ವಭಾವವನ್ನು ಹೋಲುವಂತಹ ಮಕ್ಕಳೇ ಜನಿಸುವರು. ಇದು ಅನುವಂಶೀಯ ಗುಣಲಕ್ಷಣವಾಗಿರುತ್ತದೆ. ತಂದೆ ತಾಯಿಗಳಿಬ್ಬರೂ ಕುಳ್ಳರಾಗಿದ್ದರೆ ಹುಟ್ಟುವ ಮಗವೂ ಕುಳ್ಳಾಗಿಯೇ ಹುಟ್ಟುತ್ತದೆಯೇ ವಿನಃ ಎಷ್ಟೇ ಪ್ರಯತ್ನಿಸಿದರೂ ಎತ್ತರಕ್ಕೆ ಬೆಳೆಯಲಾರದು. ಅದಕ್ಕೆ ಬೀಜದಂತೆ ಕಾಯಿ, ನೂಲಿನಂತೆ ದಾರ ಎಂದು ಈ ಗಾದೆ ಹೇಳುತ್ತದೆ.

No comments:

Post a Comment