Sunday, 25 March 2018

ಶಾತವಾಹನರು

ಶಾತವಾಹನರು :-
              ಮೌರ್ಯ ಸಾಮ್ರಾಜ್ಯದ ಪತನಾನಂತರ ಅವರ ಸಾಮಂತರಾಗಿದ್ದ ಶಾತವಾಹನರು ದಕ್ಷಿಣ ಭಾರತದಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ಕನ್ನಡ ನಾಡಿನಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿದ ಪ್ರಥಮ ರಾಜಮನೆತನ ಶಾತವಾಹನರದ್ದಾಗಿದೆ. ಶಾತವಾಹನರ ಮೂಲದ ಬಗ್ಗೆ ಒಮ್ಮತವಿಲ್ಲವಾದರೂ ಅವರು ಆಂಧ್ರದ ಮೂಲದವರೆಂದು ಊಹಿಸಲಾಗಿದೆ. ಅವರ ರಾಜಧಾನಿ ಔರಂಗಾಬಾದ್ ಜಿಲ್ಲೆಯ ಗೋದಾವರಿ ನದಿ ತೀರದಲ್ಲಿರುವ ಪೈಠಣ್ ಅಥವಾ ಪೈತಾ ಆಗಿತ್ತು. ಶಾತವಾಹನರ ರಾಜ್ಯ ಸ್ಥಾಪಕನ ಹೆಸರು ಸಿಮುಖ ಎಂದು. ಅವನು ಕ್ರಿ. ಪೂ. ೨೩೫ ರಿಂದ ೨೧೨ರವರೆಗೆ ಮೌರ್ಯರ ಸಾಮಂತನಾಗಿ ರಾಜ್ಯಭಾರ ಮಾಡಿದನು. ಸಿಮುಖನ ನಂತರ ಅವನ ಸಹೋದರ ಕೃಷ್ಣ ರಾಜ್ಯಭಾರ ಮಾಡಿದರನು. ಕೃಷ್ಣನ ನಂತರ ಸಿಮುಖನ ಪುತ್ರ ಒಂದನೇಯ ಶಾತಕರ್ಣಿ ಅಧಿಕಾರಕ್ಕೆ ಬಂದನು. ಒಂದನೇ ಶಾತಕರ್ಣಿಯ ನಂತರ ಹಲವಾರು ಅಧಿಕಾರ ನಡೆಸಿದರು. ಶಾತವಾಹನ ದೊರೆಗಳಲ್ಲೆಲ್ಲಾ ಅತ್ಯಂತ ಪ್ರಮುಖನಾದವನು ಗೌತಮೀಪುತ್ರ ಶಾತಕರ್ಣಿ. ಈತನು ದಿಗ್ವಜಯದ ಮುಖಾಂತರ ಉತ್ತರ ಭಾರತದ ಹಲವಾರು ಭೂ ಭಾಗಗಳನ್ನು ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅವನು ವೈರಿಗಳಿಗೆ ಸಿಂಹಸ್ವಪ್ನನಾಗಿದ್ದನು. ಗೌತಮೀಪುತ್ರ ಶಾತಕರ್ಣಿಗೆ '' ತ್ರೈ ಸಮುದ್ರತೋಯಪಿತವಾಹನ", "ಪ‌ಶ್ಚಿಮ ವಿಂಧ್ಯದ ಪ್ರಭು"," ರಾಜರಾಜ", ಮುಂತಾದ ಬಿರುದುಗಳಿದ್ದವು. ಅವನು ಕ್ರಿ. ಶ. ೭೮ರಲ್ಲಿ ನೂತನ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದನು ಎಂದು ನಂಬಲಾಗಿದೆ. ಗೌತಮೀಪುತ್ರನ ನಂತರ ಅಧಿಕಾರಕ್ಕೆ ಬಂದ ದುರ್ಬಲ ರಾಜರಿಂದಾಗಿ ಕ್ರಿ. ಶ. ೪ನೇ ಶತಮಾನದ ಸುಮಾರಿಗೆ ಅವರ ಅಧಿಕಾರ ಕೊನೆಗೊಂಡಿತು.

No comments:

Post a Comment