Wednesday, 28 March 2018

ಬಹಮನಿ ಸುಲ್ತಾನರು:-

ಬಹಮನಿ ಸುಲ್ತಾನರು :-
              ದೆಹಲಿಯ ಸುಲ್ತಾನನಾಗಿದ್ದ ಮಹಮ್ಮದ್-ಬಿನ್ - ತುಘಲಕ್ ನ ರಾಜ್ಯಪಾಲನಾಗಿ ದೌಲತಾಬಾದನ್ನು ನೋಡಿಕೊಳ್ಳುತ್ತಿದ್ದ ಅಲ್ಲಾ-ಉದ್-ದೀನ್ ಹಸನ್ ಬಹಮನ್ ಷಾ ಕ್ರಿ. ಶ. ೧೩೪೭ ರಲ್ಲಿ ಬಹಮನಿ ರಾಜ್ಯವನ್ನು ಸ್ಥಾಪಿಸಿದನು. ಇವನ ಇನ್ನೊಂದು ಹೆಸರು ಹಸನ್ ಗಂಗು ಎಂದು. ಈ ರಾಜ್ಯಕ್ಕೆ ಕ್ರಿ. ಶ. ೧೩೪೭ ರಿಂದ ೧೪೨೨ ರವರೆಗೆ ಗುಲ್ಬರ್ಗವು ರಾಜಧಾನಿಯಾಗಿದ್ದರೆ ನಂತರ ಬೀದರ್ ರಾಜಧಾನಿಯಾಯಿತು.
              ಹಸನ್ ಬಹಮನ್ ಷಾ (ಕ್ರಿ. ಶ. ೧೩೪೭-೧೩೫೮) ತನ್ನ ಆಳ್ವಿಕೆಯ ಅವಧಿಯಲ್ಲಿ ತನ್ನ ರಾಜ್ಯವನ್ನು ಸಾಕಷ್ಟು ವಿಸ್ತರಿಸಿ, ಅದನ್ನು ಗುಲ್ಬರ್ಗ, ದೌಲತಾಬಾದ್, ಬೀದರ್ ಮತ್ತು ಬೀರರ್ ಎಂಬ ನಾಲ್ಕು ತರಫ್ (ಪ್ರಾಂತ್ಯ) ಗಳಾಗಿ ವಿಂಗಡಿಸಿ, ಅವನ್ನು  ತರಫದಾರ ಅಥವಾ ಅಮೀರನ ಅಧೀನಕ್ಕೆ ನೀಡಿದ್ದನು.
              ಬಹಮನ್ ಷಾನ ನಂತರ ಒಂದನೇಯ ಮಹಮ್ಮದ್ ಷಾ (ಕ್ರಿ. ಶ. ೧೩೫೮-೭೫) ಸಿಂಹಾಸನವೇರಿದನು. ಈತನು ವಾರಂಗಲ್ ಮತ್ತು ವಿಜಯನಗರ ಅರಸರ ವಿರುದ್ಧ ಯುದ್ಧ ಮಾಡಿದನು. ಈತನು ಗುಲಬರ್ಗಾದಲ್ಲಿ ಕ್ರಿ. ಶ. ೧೩೬೭ ರಲ್ಲಿ ಜಾಮಿ ಮಸೀದಿಯನ್ನು ನಿರ್ಮಿಸಿದನು. ಇವನ ನಂತರ ಅಲ್ಲಾ-ಉದ್-ದೀನ್ ಮುಜಾಹಿದ್ (೧೩೭೫-೧೩೭೮) ಮತ್ತು ಎರಡನೇ ಮಹಮ್ಮದ್ ಷಾ (೧೩೭೮-೧೩೯೭) ಅಧಿಕಾರ ನಡೆಸಿದರು. ನಂತರ ಬಂದ ಫಿರೋಜ್ ಷಾ (೧೩೯೭-೧೪೨೨)ನು ಬಹಮನಿ ಸುಲ್ತಾನರಲ್ಲಿ ಅತ್ಯಂತ ಶ್ರೇಷ್ಠನೂ ಹಾಗೂ ಪ್ರಬಲನು ಆಗಿದ್ದನು. ಈತನು ವಿಜಯನಗರದ ಅರಸರೊಡನೆ ಮೂರು ಬಾರಿ ಯುದ್ಧ ಮಾಡಿದನು. ಫಿರೋಜ್ ಷಾನು ದೌಲತಾಬಾದನಲ್ಲಿ ಜ್ಯೋತಿರ್ವೀಕ್ಷಣಾಲಯವನ್ನು ಹಾಗೂ ಭೀಮಾನದಿಯ ದಡದಲ್ಲಿ ಫಿರೋಜಾಬಾದನ್ನು ನಿರ್ಮಿಸಿದನು. ಫಿರೋಜ್ ಷಾ ನಂತರ ಸಿಂಹಾಸನವೇರಿದ ಅಹ್ಮದ್ ಷಾ (೧೪೨೨-೩೬)ನು ೧೪೨೨-೨೩ ರಲ್ಲಿ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್ ಗೆ ವರ್ಗಾಯಿಸಿದನು. ಇವನ ನಂತರ ಎರಡನೇ ಅಲ್ಲಾ-ಉದ್-ದೀನ್ (೧೪೩೬-೫೮) ಸಿಂಹಾಸನವೇರಿದನು. ಅನಂತರ ಅಧಿಕಾರ ಸೂತ್ರ ಹಿಡಿದ ಹುಮಾಯುನ್ (೧೪೫೮-೬೧) ತನ್ನ ಸೇನಕನಿಂದಲೇ ಕೊಲೆಗಿಡಾಗಿ ಅವನ ಮಗ ನಿಜಾಂ ಷಾ ಸಿಂಹಾಸನವೇರಿದನು. ಇವನು ಕೇವಲ ಎರಡೇ ವರ್ಷಗಳಲ್ಲಿ ತೀರಿಕೊಂಡಿದ್ದರಿಂದ ಈತನ ಸಹೋದರ ಮೂರನೇ ಮಹಮ್ಮದ್ ೧೪೬೩ ರಲ್ಲಿ ಅಧಿಕಾರಕ್ಕೆ ಬಂದನು. ಇವನ ಕಾಲದಲ್ಲಿ ಪರ್ಷಿಯಾ ಸಂಜಾತ ಮಹ್ಮದ್ ಗವಾನ್ (೧೪೪೭-೧೪೮೧) ಎಂಬಾತ ಅಮೀರ್ - ಉಲ್-ಉಮ್ರಾ(ಮುಖ್ಯಮಂತ್ರಿ) ಪದವಿ ಪಡೆದನು. ಈತನು ಆ ಪದವಿಯಲ್ಲಿ ಬೇರೆ ಬೇರೆ ಸುಲ್ತಾನರ ಕೆಳಗೆ ೧೪೮೧ ರವರೆಗೆ ಮುಂದುವರೆದು, ವಿರೋಧಿಗಳ ಪಿತೂರಿಯಿಂದಾಗಿ ರಾಜದ್ರೋಹದ ಆಪಾದನೆ ಒಳಗಾಗಿ ಮರಣದಂಡನೆಗೆ ಒಳಗಾದನು. ಮಹಮ್ಮದ್ ಗವಾನ್ ಅಪ್ರತಿಮ ವೀರ, ಉತ್ತಮ ಆಡಳಿತಗಾರ, ವಿದ್ವಾಂಸನೂ ಆಗಿದ್ದನು. ಮನ್ಜಿರುಲ್-ಇನ್-ಷಾ, ರಿಯಾಜ್- ಉಲ್-ಇನ್-ಷಾ ಮುಂತಾದ ಗ್ರಂಥಗಳನ್ನು ರಚಿಸಿದ್ದನು.
                ಮಹಮ್ಮದ್ ಗವಾನನ ನಂತರ ಬಹಮನಿ ರಾಜ್ಯದ ಆಡಳಿತ ಸತತವಾಗಿ ಕುಸಿಯುತ್ತಲೇ ಹೋಯಿತು. ಬಹಮನಿ ರಾಜ್ಯದ ಕೊನೆಯ ದೊರೆಯಾದ ಅಮೀರ್ ಆಲಿಯು( ಕ್ರಿ. ಶ. ೧೫೨೫-೨೭) ಬೀದರ್ ನಲ್ಲಿ ಬರೀದ್ ಷಾಹಿ ವಂಶ ಸ್ಥಾಪಿಸಿ ಎರಡು ವರ್ಷಗಳ ಕಾಲ ಆಳ್ವಿಕೆ ನಡೆಸಿದನು. ಇವನ ಸಾವಿನ ನಂತರ ಬಹಮನಿ ರಾಜ್ಯ ಹರಿದು ಹಂಚಿ ಹೋಗಿ ೫ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅವುಗಳೆಂದರೆ :
        ೧. ಬಿಜಾಪುರದಲ್ಲಿ ಆದಿಲ್ ಶಾಹಿಗಳು.
        ೨. ಬೀದರ್ ನಲ್ಲಿ ಬರೀದ್ ಶಾಹಿಗಳು.
        ೩. ಬಿರಾರ್ ನಲ್ಲಿ ಇಮಾದ್ ಶಾಹಿಗಳು.
        ೪. ಅಹಮದ್ ನಗರದಲ್ಲಿ ನಿಜಾಂಶಾಹಿಗಳು.
        ೫. ಗೋಲ್ಕಂಡಾದಲ್ಲಿ ಕುತಬ್ ಶಾಹಿಗಳು.

ಬಿಜಾಪುರದ ಆದಿಲ್ ಶಾಹಿಗಳು :-
              ಬಹಮನಿ ಅರಸರ ಅಂತಿಮ ಕಾಲದಲ್ಲಿ ಅಧಿಕಾರಿಯಾಗಿದ್ದ ಯೂಸುಫ್ ಆದಿಲ್ ಷಾ (ಕ್ರಿ. ಶ. ೧೪೯೦-೧೫೧೦), ಆಂತರಿಕ ಕಲಹದಿಂದ ಬಹಮನಿ ಸಂಸ್ಥಾನ ಕೊರಗುತ್ತಿದ್ದುದರಿಂದ, ಆ ಅವಕಾಶವನ್ನು ಬಳಸಿಕೊಂಡು ಬಿಜಾಪುರದಲ್ಲಿ ಸ್ವತಂತ್ರನಾದನು. ಈತನೇ ಆದಿಲ್ ಶಾಹಿ ವಂಶದ ಸ್ಥಾಪಕ. ಇವನು ಸೊಲ್ಲಾಪುರದಿಂದ ರಾಯಚೂರಿನವರೆಗಿನ ಪ್ರದೇಶಗಳ ಮೇಲೆ ಹತೋಟಿ ಸಾಧಿಸಿದನು. ಕ್ರಿ. ಶ. ೧೫೧೩ ರಲ್ಲಿ ಹಿಂದೂಗಳ ಮೇಲೆ ಮಾತ್ರ ವಿಧಿಸುತ್ತಿದ್ದ ಜಿಜಿಯ ಎಂಬ ತಲೆಗಂದಾಯವನ್ನು ರದ್ದುಗೊಳಿಸಿದನು. ಯೂಸುಫ್ ಆದಿಲ್ ಷಾನ ನಂತರ ಅವನ ಮಗ ಇಸ್ಮಾಯಿಲ್ ಆದಿಲ್ ಷಾ (ಕ್ರಿ. ಶ. ೧೫೧೦-೩೪) ಆಡಳಿತಕ್ಕೆ ಬಂದನು. ಇವನ ನಂತರ ಬಂದ ಆದಿಲ್ ಷಾನನ್ನು ಕೆಲವೇ ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಸಲಾಯಿತು. ಆ ನಂತರ ಒಂದನೇ ಇಬ್ರಾಹಿಂ ಆದಿಲ್ ಷಾ (ಕ್ರಿ. ಶ. ೧೫೩೪-೫೭)ನು ಸಿಂಹಾಸನವೇರಿದನು. ಈತನು ಆಡಳಿತ ಭಾಷೆಯಾಗಿದ್ದ ಪರ್ಶಿಯನ್ ಭಾಷೆಯನ್ನು ತೆಗೆದು ಉರ್ದುವನ್ನು ಜಾರಿಗೆ ತಂದನು.
              ಕ್ರಿ.ಶ. ೧೫೫೭ ರಲ್ಲಿ ಒಂದನೇ ಆಲಿ ಆದಿಲ್ ಷಾ (೧೫೫೭-೮೦) ಸಿಂಹಾಸನವೇರಿದನು. ಇವನ ಅವಧಿಯಲ್ಲೇ ತಾಳಿಕೋಟೆ ಯುದ್ಧ ಕ್ರಿ. ಶ. ೧೫೬೫ ರಲ್ಲಿ ನಡೆಯಿತು. ಒಂದನೇ ಆಲಿ ಆದಿಲ್ ಷಾನ ಮರಣಾನಂತರ ಸಿಂಹಾಸನವೇರಿದ ಎರಡನೇ ಇಬ್ರಾಹಿಂ ಆದಿಲ್ ಷಾ (ಕ್ರಿ. ಶ. ೧೫೮೦-೧೬೨೬) ಚಿಕ್ಕವನಾಗಿದ್ದ ಕಾರಣ ಅವನ ತಾಯಿ ಚಾಂದ್ ಬೀಬಿ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದಳು. ಕ್ರಿ. ಶ. ೧೫೯೯ ರಲ್ಲಿ ಅಕ್ಬರನ ಸೈನ್ಯವನ್ನು ಎದುರಿಸುವಾಗ ವೀರಮರಣ ಹೊಂದಿದಳು. ಇಬ್ರಾಹಿಂ ಆದಿಲ್ ಷಾ ಒಬ್ಬ ಉದಾರಿ, ಅನ್ಯಮತ ಸಹಿಷ್ಣುವಾಗಿದ್ದ ದೊರೆಯಾಗಿದ್ದನು. ಅನೇಕ ಹಿಂದೂ ಸಂಗೀತಗಾರರು ಇವನ ಆಸ್ಥಾನದಲ್ಲಿದ್ದರು. ಇವನ ನಂತರ ಸಿಂಹಾಸನವೇರಿದ ಮಹಮ್ಮದ್ ಆದಿಲ್ ಷಾ (ಕ್ರಿ. ಶ. ೧೬೨೬-೧೬೫೮) ಮೊಘಲರ ದಾಳಿಗೆ ತುತ್ತಾಗಿ, ಸೆರೆಸಿಕ್ಕು ಅವರ ಸಾಮಂತನಾಗಿರಲು ಒಪ್ಪಿಕೊಂಡನು. ಮಹಮ್ಮದ್ ಆದಿಲ್ ಷಾನ ದಳಪತಿಗಳಾದ ರಣ ದೌಲಾಖಾನ್ ಮತ್ತು ಷಾಜಿ  ಭೋನ್ಸ್ಲೆ ಕ್ರಿ. ಶ. ೧೬೩೦ ರಲ್ಲಿ  ದಕ್ಷಿಣದಲ್ಲಿ ದಿಗ್ವಿಜಯ ಆರಂಭಿಸಿ ಕೆಳದಿ ಇಕ್ಕೇರಿಯ ವೀರಭದ್ರನಾಯಕ ಮತ್ತು ಮೈಸೂರಿನ ನರಸರಾಜ ಒಡೆಯರ್ ನನ್ನು ಸೋಲಿಸಿ ಕಪ್ಪಕಾಣಿಕೆ ಪಡೆದರು. ಹಲವಾರು ಪ್ರದೇಶಗಳು ಬಿಜಾಪುರದ ವಶವಾದವು. ಜಗತ್ ಪ್ರಸಿದ್ಧ ಗೋಲಗುಂಬಜ್ ನಿರ್ಮಿಸಿದವನು ಮಹಮ್ಮದ್ ಆದಿಲ್ ಷಾನೇ.
             ಮಹಮ್ಮದ್ ಆದಿಲ್ ಷಾನ ನಂತರ ಎರಡನೇ ಆದಿಲ್ ಷಾ ಕ್ರಿ. ಶ. ೧೬೫೬ ರಿಂದ ೧೬೭೨ ರವರೆಗೆ ಆಡಳಿತ ನಡೆಸಿದನು. ನಂತರ ಬಂದ ಸಿಕಂದರ್ ಆದಿಲ್ ಷಾ (ಕ್ರಿ. ಶ. ೧೬೭೨-೮೬)ನು ಔರಂಗಜೇಬನ ದಾಳಿಗೆ ಈಡಾಗಿ ಕ್ರಿ. ಶ. ೧೬೮೬ ರಲ್ಲಿ ಅವನಿಗೆ ಸೆರೆಯಾದನು. ಇದರೊಂದಿಗೆ ಬಿಜಾಪುರದ ಆದಿಲ್ ಶಾಹಿಗಳ ಆಳ್ವಿಕೆ ಕೊನೆಯಾಯಿತು.

No comments:

Post a Comment