Tuesday, 27 March 2018

ವಿಜಯನಗರ ಸಾಮ್ರಾಜ್ಯ :-


ವಿಜಯನಗರ ಸಾಮ್ರಾಜ್ಯ:-
               ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಕುರಿತಂತೆ ವಿದ್ವಾಂಸರಲ್ಲೇ ಭಿನ್ನಾಭಿಪ್ರಾಯಗಳಿದ್ದು, ಸಂಗಮನ ಐವರು ಮಕ್ಕಳಾದ ಹರಿಹರ, ಬುಕ್ಕ, ಕಂಪಣ, ಮಾರಪ್ಪ ಮತ್ತು ಮುದ್ದಪ್ಪ ಎಂಬುವವರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರೆಂಬುದು ಹೆಚ್ಚು ಪ್ರಚಲಿತ ಕಥೆ. ಆದರೆ, ರಾಬರ್ಟ್ ಸಿವೇಲ್ ರ ಪ್ರಕಾರ ಹರಿಹರ ಮತ್ತು ಬುಕ್ಕ ಸಹೋದರರು ಓರಂಗಲ್ಲಿನ ಪ್ರತಾಪರುದ್ರನ ಆಸ್ಥಾನದಲ್ಲಿದ್ದು, ಓರಂಗಲ್ಲು ಮುಸ್ಲಿಮರ ದಾಳಿಯಿಂದ ನಾಶವಾದ ನಂತರ ಆನೆಗೊಂದಿಯ ಕಂಪಲರಾಯನ ಆಸ್ಥಾನದಲ್ಲಿ ಉನ್ನತ ಅಧಿಕಾರ ಪಡೆದರು. ನಂತರ ಆನೆಗೊಂದಿಗೆ ಬಂದ ಮಹ್ಮದ್ - ಬಿನ್ - ತುಘಲಕ್ ನ ಪ್ರತಿನಿಧಿ ತನ್ನ ಆಳ್ವಿಕೆಯಲ್ಲಿ ಯಶಸ್ಸು ಗಳಿಸದೆ, ಹರಿಹರನನ್ನು ರಾಜನನ್ನಾಗಿಯೂ, ಬುಕ್ಕನನ್ನು ಮಂತ್ರಿಯನ್ನಾಗಿಯೂ ನೇಮಿಸಿ ಹಿಂದಿರುಗಿದನು. ಈ ಸಹೋದರರೇ ಕ್ರಿ. ಶ. ೧೩೩೬ ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರು ಎಂಬುವುದು ಅವರ ಅಭಿಪ್ರಾಯ.
             'ಶ್ರೀ ವಿರೂಪಾಕ್ಷ' ಎಂಬುದು ವಿಜಯನಗರ ಅರಸರ ರಾಜಮುದ್ರೆ, 'ವರಹ' ಅವರ  ಲಾಂಛನವಾಗಿತ್ತು.
                ಈ ಸಾಮ್ರಾಜ್ಯವನ್ನು ಆಳಿದ ೪ ರಾಜಮನೆತನಗಳೆಂದರೆ,
೧. ಸಂಗಮವಂಶ (ಕ್ರಿ. ಶ. ೧೩೩೬-೧೪೮೫)
೨.ಸಾಳುವವಂಶ (ಕ್ರಿ. ಶ. ೧೪೮೫-೧೫೦೩)
೩. ತುಳುವ ವಂಶ( ಕ್ರಿ. ಶ. ೧೫೦೩-೧೫೬೫)
                        (ಕ್ರಿ. ಶ. ೧೫೬೫-೧೫೭೦)                        
                            ಪೆನುಗೊಂಡೆಯಲ್ಲಿ.
೪. ಅರವೀಡು ವಂಶ(ಕ್ರಿ. ಶ. ೧೫೭೦-೧೬೪೬)
                            ಪೆನುಗೊಂಡೆಯಲ್ಲಿ
                             (ಕ್ರಿ. ಶ. ೧೬೪೬-೧೬೬೫)
                             ವೆಲ್ಲೂರಿನಲ್ಲಿ
                             (ಕ್ರಿ. ಶ. ೧೬೬೫-೧೬೯೧)
                              ಚಂದ್ರಗಿರಿಯಲ್ಲಿ
 
೧. ಸಂಗಮವಂಶ (ಕ್ರಿ. ಶ. ೧೩೩೬-೧೪೮೫):-
                  ಒಂದನೇ ಹರಿಹರ ವಿಜಯನಗರ ಮತ್ತು ಸಂಗಮವಂಶದ ಮೊದಲ ಅರಸ. ವಿದ್ಯಾರಣ್ಯರು ಈತನ ಗುರುಗಳಾಗಿದ್ದರು. ಆನೆಗೊಂದಿ ಇವನ ರಾಜಧಾನಿಯಾಗಿತ್ತು. ಇವನು ರಾಜ್ಯವನ್ನು ಸ್ವಲ್ಪ ಮಟ್ಟಿಗೆ ವಿಸ್ತರಿಸಿದನು. ಹಾಗಾಗಿ ಬಹುಮನಿ ಸುಲ್ತಾನರೊಡನೆ ಸಂಘರ್ಷಗಳು ನಿರಂತರವಾಗಿ ನಡೆದವು. ೧ನೇ ಹರಿಹರನ ನಂತರ ಒಂದನೇ ಬುಕ್ಕರಾಯ(ಕ್ರಿ. ಶ. ೧೩೫೬-೧೩೭೭) ಅಧಿಕಾರಕ್ಕೆ ಬಂದನು. ಬುಕ್ಕರಾಯನ ನಂತರ ಅವನ ಎರಡನೇ ಮಗ ಹರಿಹರನು (ಕ್ರಿ. ಶ. ೧೩೭೭-೧೪೦೪) ಸಿಂಹಾಸನವೇರಿದನು. ಈತನ ಮರಣಾನಂತರ ಇವನ ಮಕ್ಕಳಲ್ಲೇ ಕಲಹವಾಗಿ ಇದರಲ್ಲಿ ಜಯಶೀಲನಾದ ಒಂದನೇಯ ದೇವರಾಯ ವೆನಿಷಿಯಾದ ಪ್ರವಾಸಿ ನಿಕೊಲೊಕೊಂಟಿ ವಿಜಯನಗರಕ್ಕೆ ಭೇಟಿ ನೀಡಿದ್ದನು. ಒಂದನೇ ದೇವರಾಯನ ನಂತರ ಅವನ ಮಗ ವೀರವಿಜಯರಾಮನು ಎರಡು ವರ್ಷ ಆಡಳಿತ ನಡೆಸಿದನು. ನಂತರ ವೀರವಿಜಯರಾಮನ ಮಗ ಎರಡನೇ ದೇವರಾಯ ಸಿಂಹಾಸನವೇರಿದನು. ಈತ ಸಂಗಮ ವಂಶದ ಶ್ರೇಷ್ಠ ದೊರೆ 'ಗಜಬೇಂಟೆಕಾರ' ಎಂಬ ಬಿರುದು ಹೊಂದಿದ್ದ ಈತನ ಆಸ್ಥಾನಕ್ಕೆ ಪರ್ಷಿಯಾದ ಪ್ರವಾಸಿ ಅಬ್ದುಲ್ ರಜಾಕ್ ಭೇಟಿ ನೀಡಿದ್ದನು. ಎರಡನೇ ದೇವರಾಯನ ನಂತರ ಸಿಂಹಾಸನವೇರಿದ ಅವನ ಮಗ ಮಲ್ಲಿಕಾರ್ಜುನ ಅಷ್ಟು ಸಮರ್ಥನಾಗಿರದ ಕಾರಣ ಕ್ರಿ. ಶ. ೧೪೮೫ ರಲ್ಲಿ ಸಿಂಹಾಸನ ಸಾಳುವ ವಂಶಕ್ಕೆ ಹೋಗುತ್ತದೆ.
             
ಸಾಳುವ ವಂಶ(೧೪೮೫-೧೫೦೩):-
                 ದುರ್ಬಲವಾದ ಸಂಗಮ ವಂಶವನ್ನು ಹತ್ತಿಕ್ಕಿ ಸಾಳುವ ವಂಶದ ನರಸಿಂಹನು ಕ್ರಿ. ಶ. ೧೪೮೫ ರಲ್ಲಿ ಸಿಂಹಾಸನವೇರಿದನು. ಕ್ರಿ. ಶ. ೧೪೯೧ ರಲ್ಲಿ ಸಾಳುವ ನರಸಿಂಹ ತೀರಿಕೊಂಡಾಗ ಅವನ ಮಕ್ಕಳಾದ ತಿಪ್ಪಭೂಪ ಮತ್ತು ಎರಡನೇ ನರಸಿಂಹ ಅಪ್ರಾಪ್ತರಾಗಿದ್ದ ಕಾರಣ ಹಿರಿಯ ಮಗ ತಿಪ್ಪಭೂಪನನ್ನು ಸಿಂಹಾಸನದಲ್ಲಿ ಕೂರಿಸಿ ತುಳುವ ವಂಶದ ಮಂತ್ರಿ ನರಸನಾಯಕನು ರಾಜ ಪ್ರತಿನಿಧಿಯಾಗಿ ಆಡಳಿತ ನಿರ್ವಹಿಸಿದನು. ತಿಮ್ಮದಂಡನಾಯಕನೆಂಬ ಸೇನಾನಿಯಿಂದ ತಿಮ್ಮಭೂಪನ ಕೊಲೆಯಾಯಿತು. ನಂತರ ಸಿಂಹಾಸನವೇರಿದ ಎರಡನೇ ನರಸಿಂಹನು ತಿಮ್ಮದಂಡನಾಯಕನ ತಲೆ ಕಡಿಸಿದನು. ತುಳುವ ನರಸನಾಯಕನು ಎರಡನೇ ನರಸಿಂಹನ ಕಾಲದಲ್ಲಿ ಮಂತ್ರಿಯಾಗಿ ಮುಂದುವರಿದನು. ಇವರಿಬ್ಬರ ನಡುವೆ ಘರ್ಷಣೆ ನಡೆದು ಎರಡನೇ ನರಸಿಂಹನು ಕೊಲೆಯಾದನು. ಕ್ರಿ. ಶ. ೧೫೦೩ ರಲ್ಲಿ ನರಸನಾಯಕನ ನಿಧನಾನಂತರ ಅವನ ಹಿರಿಯ ಮಗ ಎರಡನೇ ನರಸನಾಯಕನು ಸ್ವತಂತ್ರ ಅರಸನಾದನು. ಇವನ ಮಕ್ಕಳೇ ವೀರ ನರಸಿಂಹ ಮತ್ತು ಕೃಷ್ಣದೇವರಾಯ.

ತುಳುವ ವಂಶ (ಕ್ರಿ. ಶ. ೧೫೦೩-೧೫೬೫):-
          ವೀರನರಸಿಂಹ( ಕ್ರಿ. ಶ. ೧೫೦೫-೧೫೧೯) ತುಳುವ ವಂಶದ ಮೊದಲ ದೊರೆ. ಈತನು ಕ್ರಿ. ಶ. ೧೫೧೦ ರಲ್ಲಿ ಕಾಲವಾದ ನಂತರ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ದೊರೆಯಾದ ಕೃಷ್ಣದೇವರಾಯ (ಕ್ರಿ. ಶ ೧೫೧೦-೧೫೩೦) ಸಿಂಹಾಸನವೇರಿದನು. ಈತನ ಆಡಳಿತ ಒಂದು ಸುವರ್ಣಯುಗವೆನಿಸಿದೆ. ಕೃಷ್ಣದೇವರಾಯನು ಪೋರ್ಚುಗೀಸರಿಗೆ ವಾಣಿಜ್ಯ ವ್ಯವಹಾರಕ್ಕೆ ಪ್ರೋತ್ಸಾಹ ನೀಡಿದನು. ಬಹಮನಿ ಸುಲ್ತಾನ ಯೂಸುಫ್ ಆದಿಲ್ ಷಾನನ್ನು ಯುಧ್ಧದಲ್ಲಿ ಸೋಲಿಸಿದನು. ಬಂಡೆದಿದ್ದ ಉಮ್ಮತ್ತೂರಿನ ಪಾಳೇಗಾರನನ್ನು ಹತ್ತಿಕ್ಕಿ ಶ್ರೀರಂಗಪಟ್ಟಣ, ಶಿವನಸಮುದ್ರವನ್ನು ವಶಪಡಿಸಿಕೊಂಡನು. ಕ್ರಿ. ಶ. ೧೫೧೩ ರಲ್ಲಿ ಒರಿಸ್ಸಾದ ಗಜಪತಿ ಪ್ರತಾಪರುದ್ರನಿಂದ ಉದಯ ಗಿರಿಯನ್ನು ಗೆದ್ದುಕೊಂಡನಲ್ಲದೆ ನಂತರದ ಮುತ್ತಿಗೆಯಲ್ಲಿ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡನು. ಆ ನಂತರ ಒರಿಸ್ಸಾದ ಗಜಪತಿಯನ್ನು ಸೋಲಿಸಿ ಅವನ ರಾಜಧಾನಿ ಕಟಕ್ ನ್ನು ಗೆದ್ದುಕೊಂಡು ಅವನೊಡನೆ ಒಪ್ಪಂದ ಮಾಡಿಕೊಂಡನು. ಈ ಒಪ್ಪಂದದಿಂದಾಗಿ ಗಜಪತಿ ಪುತ್ರಿ ಜಗನ್ಮೋಹಿನಿಯನ್ನು ಕೃಷ್ಣದೇವರಾಯನು ವಿವಾಹವಾದನು.
              ಕೊಂಡವೀಡನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ ಗೋಲ್ಕಂಡದ ಕುತಬ್ ಷಾನನ್ನು ಹಾಗೂ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾನನ್ನು ಸೋಲಿಸಿದನು. ಕೃಷ್ಣದೇವರಾಯನ ಕಾಲದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಕೂಡಿದ್ದ ವಿಜಯನಗರ ಸಾಮ್ರಾಜ್ಯ ಉತ್ತರದಲ್ಲಿ ಕೃಷ್ಣ, ಗೋದಾವರಿ, ಪೂರ್ವ - ಪಶ್ಚಿಮಗಳಲ್ಲಿ ಬಂಗಾಳಿ ಮತ್ತು ಅರಬ್ಬಿ ಸಮುದ್ರದವರೆಗೂ, ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ವ್ಯಾಪಿಸಿತ್ತು. ಅವನು ಕ್ರಿ. ಶ. ೧೫೩೦ ರಲ್ಲಿ ಕಾಲವಾದನು. ಕೃಷ್ಣ ದೇವರಾಯನು ಅನ್ಯಮತ ಸಹಿಷ್ಣುವಾಗಿದ್ದನಲ್ಲದೆ ಕಲೆ, ಸಾಹಿತ್ಯದ ಪ್ರೇಮಿಯಾಗಿದ್ದನು.
              ಕೃಷ್ಣದೇವರಾಯನ ಮರಣಾನಂತರ ಅಚ್ಚುತರಾಯ(ಕ್ರಿ. ಶ. ೧೫೨೯-೪೨) ಸಿಂಹಾಸನವೇರಿದನು. ಇವನ ನಂತರ ಕೃಷ್ಣದೇವರಾಯನ ಅಳಿಯ ಅರವೀಡು ರಾಮರಾಯನು ಸದಾಶಿವ (೧೫೪೩-೭೦) ನನ್ನು ಸಿಂಹಾಸನದಲ್ಲಿ ಕೂರಿಸಿ, ತಾನೇ ಆಡಳಿತ ನಡೆಸಿದನು. ರಾಮರಾಯನು ಕ್ರಿ. ಶ. ೧೫೪೩-೧೫೫೦ ರವರೆಗೆ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿ ನಂತರ ಸದಾಶಿವನನ್ನು ಸೆರೆಗೆ ತಳ್ಳಿ ಕ್ರಿ. ಶ. ೧೫೬೫ ರವರೆಗೆ ಸ್ವತಃ ತಾನೇ ರಾಜ್ಯವಾಳಿದನು. ಕ್ರಿ. ಶ. ೧೫೬೫ ಜನವರಿ ೨೩ ರಂದು ಬಿಜಾಪುರ, ಅಹ್ಮದ್ ನಗರ, ಬೀದರ್ ಮತ್ತು ಗೋಲ್ಕಂಡಾಗಳ ಸುಲ್ತಾನರ ಸೈನ್ಯ ಹಾಗೂ ವಿಜಯನಗರದ ಸೈನ್ಯಗಳ ನಡುವೆ ರಕ್ಕಸ ತಂಗಡಗಿ ಅಥವಾ ತಾಳಿಕೋಟೆಯಲ್ಲಿ ಭೀಕರ ಯುದ್ಧವಾಗಿ ವಿಜಯನಗರ ಸೈನ್ಯಕ್ಕೆ ಸೋಲಾಯಿತು. ರಾಮರಾಯ ಹತನಾದನು. ಈ ಯುದ್ಧದ ನಂತರ ರಾಮರಾಯನ ತಮ್ಮ ತಿರುಮಲ ಪೆನುಗೊಂಡೆಗೆ ಸೆರೆಯಲ್ಲಿದ್ದ ಸದಾಶಿವನೊಡನೆ ಪಲಾಯನ ಮಾಡಿದನು. ವಿಜಯನಗರದ ಅರಮನೆ ಶತೃಗಳಿಂದ ಸೆರೆಗೊಂಡಿತು.

ಅರವೀಡು ವಂಶ (ಕ್ರಿ. ಶ. ೧೫೭೦-೧೬೪೬):-
            ಪೆನುಗೊಂಡೆಗೆ ಪಲಾಯನಗೈದ ತಿರುಮಲ ಅಲ್ಲಿಂದ ದಕ್ಷಿಣದ ಭಾಗಗಳನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸಿದನು. ಕ್ರಿ. ಶ. ೧೫೭೦ ರಲ್ಲಿ ಸದಾಶಿವನ ಕೊಲೆಯಾಗಲಾಗಿ ಅವನೇ ರಾಜನಾದನು. ತಿರುಮಲ ಸಾವಿನ ನಂತರ ಕ್ರಿ. ಶ. ೧೫೭೨ ರಲ್ಲಿ ಅವನ ಹಿರಿಯ ಮಗ ಒಂದನೇ ಶ್ರೀರಂಗರಾಯ ಸಿಂಹಾಸನವೇರಿದನು. ಕ್ರಿ. ಶ. ೧೫೮೦ ರಲ್ಲಿ ತಿರುಮಲನ ಮೂರನೇ ಮಗ ಎರಡನೇ ವೆಂಕಟ ಸಿಂಹಾಸನವೇರಿದನು. ಈತನು ದಕ್ಷನಾಗಿದ್ದನು. ಈತನ ನಂತರ ಬಂದ ಅರಸರು ಅಷ್ಟು ಪ್ರಬಲರಾಗಿರದ ಕಾರಣ ವಿಜಯನಗರ ಸಾಮ್ರಾಜ್ಯ ನಶಿಸಿ ಹೋಯಿತು.
              ವಿಜಯನಗರದ ಅರಸರು ಕಲೆ, ಸಾಹಿತ್ಯ, ವಾಸ್ತುಶಿಲ್ಪಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿದ್ದರು. ಅವರ ಕಾಲದ ದೇವಾಲಯಗಳು ಹಂಪೆ (ವಿಠ್ಠಲಸ್ವಾಮಿ ದೇವಾಲಯ, ವಿರೂಪಾಕ್ಷ ದೇವಾಲಯ), ಲೇಪಾಕ್ಷಿ (ವೀರಭದ್ರೇಶ್ವರ ದೇವಾಲಯ), ಶೃಂಗೇರಿ (ವಿದ್ಯಾಶಂಕರ ದೇವಾಲಯ) ಶ್ರೀಶೈಲ, ಭಟ್ಕಲ್, ನಂದಿ, ಮೂಡಬಿದರೆ, ಕೋಲ್ಹಾರ, ಚಿದಂಬರ ಮುಂತಾದ ಕಡೆಗಳಲ್ಲಿ ಈಗಲೂ ಕಂಡು ಬರುತ್ತವೆ.

No comments:

Post a Comment