ಸಾಮಾಜಿಕ - ಧಾರ್ಮಿಕ ಆಂದೋಲನಗಳು:-
ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಕಾರಣವಾದ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಆಂದೋಲನಗಳು ಕ್ರಿ. ಶ. ೯ನೇ ಶತಮಾನದಿಂದ ೧೪ನೇ ಶತಮಾನದವರೆಗೆ ಭಾರತದಲ್ಲಿ ನಡೆದವು. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಬಸವೇಶ್ವರರು ಕರ್ನಾಟಕದಲ್ಲಿ ಧಾರ್ಮಿಕ ಆಂದೋಲನಗಳನ್ನು ನಡೆಸಿ, ಸಾಮಾಜಿಕ ಬದಲಾವಣೆಗೆ ಕಾರಣರಾದರು. ಸಾಕಷ್ಟು ಖ್ಯಾತಿ ಪಡೆದ ಅವರನ್ನು
ಶಂಕರಾಚಾರ್ಯರು- (ಕ್ರಿ. ಶ. ೭೭೮-೮೨೦):-
ಇವರು ಕ್ರಿ. ಶ. ೭೭೮ ರಲ್ಲಿ ಕೇರಳದ ಕಾಲಟಿ ಎಂಬ ಗ್ರಾಮದಲ್ಲಿ ಶಿವಗುರು ಮತ್ತು ಆರ್ಯಾಂಬಾ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು. ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ ಉಪದೇಶವಾಗಿ ಸನ್ಯಾಸ ದೀಕ್ಷೆ ಪಡೆದರು. ಶಂಕರರು ಅದ್ವೈತ ಸಿದ್ಧಾಂತವನ್ನು ಬೋಧಿಸಲು ಭಾರತದಾದ್ಯಂತ ಸಂಚರಿಸಿದರು. ಉಪನಿಷತ್ತು ಬ್ರಹ್ಮಸೂತ್ರ ಹಾಗೂ ಭಗವದ್ಗೀತೆಗಳ ಮೇಲಿನ ಭಾಷ್ಯಗಳನ್ನು ಅವರು ರಚಿಸಿದ್ದರಲ್ಲದೆ, ವಿವೇಕ ಚೂಡಾಮಣಿ, ದಕ್ಷಿಣಾಮೂರ್ತಿ ಸ್ತೋತ್ರ, ಆನಂದಲಹರಿ, ಆತ್ಮಭೋಧ, ಭಜಗೋವಿಂದ ಸ್ತೋತ್ರ, ವೇದಾಂತ ಸಾರ, ವೇದಾಂತ ಸಂಗ್ರಹ ಮುಂತಾದ ಗ್ರಂಥಗಳನ್ನು ರಚಿಸಿದರು.
ಶಂಕರರು ತಮ್ಮ 'ಅದ್ವೈತ' ಸಿದ್ಧಾಂತದಲ್ಲಿ ಲೋಕದಲ್ಲಿ ಬ್ರಹ್ಮನೇ ಸತ್ಯ ಅವನು ನಿರ್ಗುಣ ನಿರಾಕಾರ, ಮತ್ತು ಸ್ವಪ್ರಕಾಶಕ. ಅವನನ್ನು ಬಿಟ್ಟರೆ ಜಗತ್ತೆಲ್ಲಾ ಬರಿಯ ಮಾಯೆ ಎಂದು ಭೋದಿಸಿದರು. ಅವರು ಭಾರತದಾದ್ಯಂತ ಹಲವು ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಪೂರ್ವ ದಿಕ್ಕಿನಲ್ಲಿ ಒರಿಸ್ಸಾದ ಪುರಿಯಲ್ಲಿ ಸ್ಥಾಪಿಸಿರುವ ಗೋವರ್ಧನ ಪೀಠ, ಪಶ್ಚಿಮ ದಿಕ್ಕಿನಲ್ಲಿ ಗುಜರಾತ್ ನ ದ್ವಾರಕಾದಲ್ಲಿ ಸ್ಥಾಪಿಸಿರುವ ಕಾಳಿಕಾಮಠ, ಉತ್ತರ ದಿಕ್ಕಿನಲ್ಲಿ ಉತ್ತರ ಪ್ರದೇಶದ ಬದರೀಯಲ್ಲಿ ಸ್ಥಾಪಿಸಿರುವ ಜ್ಯೋತಿರ್ಮಠ, ಹಾಗೂ ದಕ್ಷಿಣದಲ್ಲಿ ಕರ್ನಾಟಕದ ಶೃಂಗೇರಿಯಲ್ಲಿ ಸ್ಥಾಪಿಸಿರುವ ಶಾರದಾ ಪೀಠ ಮುಖ್ಯವಾದವುಗಳಾಗಿವೆ.
ಬಸವೇಶ್ವರ(ಕ್ರಿ. ಶ. ೧೧೩೨-೧೧೬೮) :-
ಬಸವೇಶ್ವರರು ಕ್ರಿ. ಶ. ೧೧೩೨ ರಲ್ಲಿ ಬಾಗೇವಾಡಿಯಲ್ಲಿ ಮಾದರಸ ಹಾಗೂ ಮಾದಲಾಂಬಿಕೆ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ಹಿರಿಯರು ಉಪನಯನ ಮಾಡಲು ಮುಂದಾದಾಗ ಅದನ್ನು ನಿರಾಕರಿಸಿ, ಮನೆಯನ್ನು ತೊರೆದು ಕೃಷ್ಣ - ಮಲಪ್ರಭಾ ನದಿಗಳ ಸಂಗಮ ಸ್ಥಳವಾದ ಕಪ್ಪಡಿ ಅಥವಾ ಸಂಗಮೇಶ್ವರಕ್ಕೆ ತೆರಳಿ ಜಾತವೇದ ಮುನಿಗಳ ಶಿಷ್ಯರಾದರು. ವೇದಗಳಲ್ಲಿ ಪರಿಣತಿ ಪಡೆದು ಜನರಲ್ಲಿನ ಮೌಢ್ಯಗಳನ್ನು ತೊಡೆದು ಹಾಕುವ ನಿರ್ಧಾರ ಮಾಡಿದರು. ಕಲ್ಯಾಣದ ಕಲಚೂರಿಗಳ ದೊರೆ ಬಿಜ್ಜಳ ತನ್ನ ಮಂತ್ರಿಯನ್ನಾಗಿ ನೇಮಿಸಿಕೊಂಡನು. ಮಂತ್ರಿಯಾದ ನಂತರ ಬಸವೇಶ್ವರರು ಇನ್ನೊಬ್ಬ ಮಂತ್ರಿಯಾದ ಬಲದೇವನ ಮಗಳು ಗಂಗಾಂಬಿಕೆಯನ್ನು ವಿವಾಹವಾದರು. ನಂತರ ಗಂಗಾಂಬಿಕೆಯ ಅಪೇಕ್ಷೆಯ ಮೇರೆಗೆ ಬಿಜ್ಜಳನ ಸಾಕು ಮಗಳು ನೀಲಾಂಬಿಕೆಯನ್ನು ವಿವಾಹವಾದರು.
ಮಂತ್ರಿ ಕೆಲಸದ ನಡುವೆ ಬಸವೇಶ್ವರರು ಜಾತಿ ಭೇದ, ಧಾರ್ಮಿಕ ಮೂಢನಂಬಿಕೆಗಳು, ಜಾತಿ ಪದ್ಧತಿಯ ವಿರುದ್ಧ ಸಮರ ಸಾರಿ, ಅಂತರ್ಜಾತೀಯ ವಿವಾಹಗಳನ್ನು ನೆರವೇರಿಸಿದರು. ಜಾತಿ ವರ್ಗಗಳನ್ನು ಟೀಕಿಸಿದರು. 'ದಯಯೇ ಧರ್ಮದ ಮೂಲವಯ್ಯ' ಎಂದು ಭೋದಿಸಿದರು. ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದರು. ತುಂಬಾ ಖ್ಯಾತರಾದ ಬಸವೇಶ್ವರರು ದೊರೆ ಬಿಜ್ಜಳನ ಅಸೂಯೆಗೆ ಈಡಾದರು. ಹಾಗಾಗಿ ಕಲ್ಯಾಣವನ್ನು ತ್ಯಜಿಸಿದರು. ಕಲ್ಯಾಣವನ್ನು ಬಸವೇಶ್ವರರು ತ್ಯಜಿಸಿದ್ದರಿಂದ ಜನರು ರೊಚ್ಚಿಗೆದ್ದು ಬಿಜ್ಜಳನನ್ನು ಕೊಲೆ ಮಾಡಿದರು. ಇದರಿಂದ ತೀರಾ ನೊಂದ ಬಸವೇಶ್ವರರು ಕೂಡಲ ಸಂಗಮೇಶ್ವರನಲ್ಲಿ ಐಕ್ಯರಾದರು.
ಮಧ್ವಾಚಾರ್ಯರು :-
ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಮಧ್ವಾಚಾರ್ಯರು ಉಡುಪಿಯ ಸಮೀಪದ ಪಾಜಕ ಎಂಬ ಗ್ರಾಮದಲ್ಲಿ ಮಧ್ವಗೃಹ (ನಡುಮನೆ) ನಾರಾಯಣ ಭಟ್ಟ ಮತ್ತು ವೇದವತಿ ದಂಪತಿಗಳ ಮಗನಾಗಿ ಕ್ರಿ. ಶ. ೧೨೩೮ ರಲ್ಲಿ ಜನಿಸಿದರು. ಇವರ ಮೊದಲ ಹೆಸರು ವಾಸುದೇವ. ಸಾಕಷ್ಟು ವ್ಯಾಸಂಗ ಮಾಡಿದ್ದ ಮಧ್ವಾಚಾರ್ಯರು ವ್ಯಾಪಕ ಪ್ರವಾಸ ಮಾಡಿದರು. ಅವರು ಉತ್ತರ ಭಾರತದ ಪ್ರವಾಸ ಮುಗಿಸಿ ವಾಪಸಾಗುವಾಗ ಅವರಿಗೆ ದ್ವಾರಕೆಯಲ್ಲಿ ದೊರಕಿದ ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು. ಅದ್ವೈತ ಸಿದ್ಧಾಂತದ ತೀವ್ರ ವಿರೋಧಿಯಾಗಿದ್ದ ಅವರು, ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅವರ ಪ್ರಕಾರ ವಿಶ್ವದ ಕರ್ತೃ ಹಾಗೂ ಅದರ ಪಾಲಕರು ವಿಷ್ಣು ಮತ್ತು ಲಕ್ಷ್ಮೀ, ಜೀವಾತ್ಮ ಮತ್ತು ಪರಮಾತ್ಮ ಎರಡೂ ಒಂದೇ ಅಲ್ಲ, ಅವು ಬೇರೆ ಬೇರೆ, ಪರಮಾತ್ಮನನ್ನು ಒಲಿಸಿಕೊಳ್ಳಲು ಭಕ್ತಿ ಅತ್ಯಂತ ಸೂಕ್ತವಾದದು ಮತ್ತು ಸರಳವಾದದ್ದು.
ವೇದೋಪನಿಷತ್ತುಗಳಲ್ಲಿ ಪಾರಂಗತರಾಗಿದ್ದ ಮಧ್ವಾಚಾರ್ಯರು ಹಲವಾರು ಕೃತಿಗಳನ್ನು ರಚಿಸಿದರು. ಅವರು ಬರೆದ ೩೭ ಕೃತಿಗಳು ಲಭ್ಯವಾಗಿದ್ದು ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಗೀತಾಭಾಷ್ಯ, ಬ್ರಹ್ಮಸೂತ್ರ ಭಾಷ್ಯ, ತತ್ವವಿವೇಕ, ವಿಷ್ಣುತತ್ವನಿರ್ಣಯ, ಅನುವ್ಯಾಕರಣ, ಅನುಭಾಷ್ಯ, ಗೀತಾತಾತ್ಪರ್ಯ ನಿರ್ಣಯ ಇತ್ಯಾದಿ.
No comments:
Post a Comment