Monday, 26 March 2018

ಮಾನ್ಯಖೇಟದ ರಾಷ್ಟ್ರಕೂಟರು(ಕ್ರಿ. ಶ. ೭೩೭-೯೭೩)

ರಾಷ್ಟ್ರಕೂಟರು:-
            ಬಾದಾಮಿಯ ಚಾಲುಕ್ಯರ ನಂತರ ಕರ್ನಾಟಕವನ್ನು ಆಳಿದ ರಾಜಮನೆತಗಳಲ್ಲಿ ರಾಷ್ಟ್ರಕೂಟರು ಪ್ರಮುಖರಾಗಿದ್ದಾರೆ. ಇವರು ಸುಮಾರು ಎರಡೂವರೆ ಶತಮಾನಗಳ ಕಾಲ ರಾಜ್ಯಭಾರ ನಡೆಸಿದರು. ಚಾಲುಕ್ಯರ ಸಾಮಂತರಾಗಿದ್ದ ಇವರು ಚಾಲುಕ್ಯರ ಅವನತಿಯ ನಂತರ ಸ್ವತಂತ್ರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಇವರು ತಮ್ಮನ್ನು 'ಲಟ್ಟಲೂರ ಪುರವರಾಧೀಶ್ವರ' ರೆಂದು ಗುರುತಿಸಿಕೊಂಡಿದ್ದಾರೆ. ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ(ಮಳಖೇಡ)ವಾಗಿತ್ತು ಹಾಗೂ ಲಾಂಛನ 'ಗರುಡ' ವಾಗಿತ್ತು.
               ಕ್ರಿ.ಶ. ೭೩೫ರಿಂದ ೭೫೬ರ ವರೆಗೆ ಆಳ್ವಿಕೆ ನಡೆಸಿದ 'ದಂತಿದುರ್ಗನು' ರಾಷ್ಟ್ರಕೂಟ ರಾಜ್ಯ ಸ್ಥಾಪಕ. ಬಾದಾಮಿ ಚಾಲುಕ್ಯರ ಸಾಮಂತನಾಗಿದ್ದ ಈತ ಕ್ರಿ. ಶ. ೭೫೨-೫೩ರಲ್ಲಿ ಚಾಲುಕ್ಯರ ಕೊನೆಯ ಅರಸ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಸ್ವತಂತ್ರ ರಾಜ್ಯ ಸ್ಥಾಪನೆ ಮಾಡಿದನಲ್ಲದೇ ಮಾಳವ, ಗುಜರಾತ್ ಪ್ರದೇಶಗಳನ್ನು ಆಕ್ರಮಿಸಿಕೊಂಡು ಆ ನಂತರ ಕಂಚಿಯ ಪಲ್ಲವರು, ಮಧುರೈಯ ಪಾಂಡ್ಯರನ್ನು ಸೋಲಿಸಿ ರಾಷ್ಟ್ರಕೂಟರ ಸಾಮ್ರಾಜ್ಯ ಬೆಳೆಸಿದನು.
            ದಂತಿದುರ್ಗನ ನಂತರ ಒಂದನೇ ಕೃಷ್ಣ (ಕ್ರಿ. ಶ. ೭೫೬-೭೭೪) ಸಿಂಹಾಸನವೇರಿದನು. ಇವನು ವಿಶ್ವವಿಖ್ಯಾತ ಎಲ್ಲೋರದ ಕೈಲಾಸ ದೇವಾಲಯಗಳನ್ನು ನಿರ್ಮಿಸಿದನು. ಒಂದನೇ ಕೃಷ್ಣನ ನಂತರ ಎರಡನೇ ಗೋವಿಂದ, ಧ್ರುವ ಹಾಗೂ ಮೂರನೇ ಗೋವಿಂದ ಅಧಿಕಾರ ನಡೆಸಿದರು.
            ಮೂರನೇ ಗೋವಿಂದನ ನಂತರ ಅಧಿಕಾರಕ್ಕೆ ಬಂದ ಅವನ ಮಗನಾದ ಅಮೋಘವರ್ಷ ನೃಪತುಂಗ( ಕ್ರಿ. ಶ. ೮೧೪-೮೭೮) ರಾಷ್ಟ್ರಕೂಟರ ಅತ್ಯಂತ ಪ್ರಸಿದ್ಧ ದೊರೆ. ಈತನು ಪಟ್ಟಕ್ಕೆ ಬಂದಾಗ ಕೇವಲ ೧೪ ವರ್ಷದ ಬಾಲಕನಾಗಿದ್ದನು. ಹಾಗಾಗಿ ಇವನ ಪರವಾಗಿ ಈತನ ಚಿಕ್ಕಪ್ಪ ರಾಜ್ಯಭಾರ ಮಾಡಿದನು. ಕ್ರಿ. ಶ. ೮೨೧ರಲ್ಲಿ ಸಿಂಹಾಸನವೇರಿ ಅಧಿಕಾರ ವಹಿಸಿಕೊಂಡ ಅಮೋಘ ವರ್ಷನು ಅವಿಧೇಯರಾಗಿದ್ದ ಅನೇಕ ಸಾಮಂತರನ್ನು ಬಗ್ಗು ಬಡಿದನಲ್ಲದೆ, ಚಾಲುಕ್ಯರ ದೊರೆ ಗುಣಗ ವಿಜಯಾದಿತ್ಯವನ್ನು ಸೋಲಿಸಿದನು. ಈತನು ಧರ್ಮನಿಷ್ಠನೂ, ಶಾಂತಪ್ರಿಯನೂ ಮತ್ತು ಸ್ವತಃ ಕವಿಯೂ ಆಗಿದ್ದನು. ಅಮೋಘವರ್ಷನಿಗೆ 'ವೀರನಾರಾಯಣ' ಎಂಬ ಬಿರುದು ಇತ್ತು. ಕನ್ನಡದ ಮೊದಲ ಕೃತಿ ಎನಿಸಿರುವ 'ಕವಿರಾಜಮಾರ್ಗ ಮಾರ್ಗ' ವನ್ನು ರಚಿಸಿದವನು ಇವನೇ. ಕ್ರಿ. ಶ. ೮೫೧ರಲ್ಲಿ ಅರೇಬಿಯಾದ ಪ್ರವಾಸಿ ಸುಲೇಮಾನ್ ನು ಅಮೋಘವರ್ಷನ ಆಸ್ಥಾನಕ್ಕೆ ಭೇಟಿ ನೀಡಿದ್ದನು. ಸುಮಾರು ೬೪ ವರ್ಷಗಳ ಕಾಲ ರಾಜ್ಯಭಾರ ಮಾಡಿದ ಅಮೋಘವರ್ಷನು ಕ್ರಿ. ಶ. ೮೭೮ರಲ್ಲಿ ನಿಧನ ಹೊಂದಿದನು.
                  ಅಮೋಘವರ್ಷನ ನಂತರ ಸಿಂಹಾಸನವೇರಿದ ಯಾವ ರಾಷ್ಟ್ರಕೂಟ ದೊರೆಗಳೂ ಅಷ್ಟು ಪ್ರಬಲರಾಗಿರಲಿಲ್ಲ. ರಾಷ್ಟ್ರಕೂಟರ ಕೊನೆಯ ದೊರೆ ಇಮ್ಮಡಿ ಕರ್ಕನನ್ನು ಕ್ರಿ. ಶ. ೯೭೩ ರಲ್ಲಿ ಕಲ್ಯಾಣ ಚಾಲುಕ್ಯ ದೊರೆ ಎರಡನೇ ತೈಲಪನು ಸೋಲಿಸಿ ಕಲ್ಯಾಣದ ಚಾಲುಕ್ಯರ ಆಳ್ವಿಕೆಗೆ ತಳಹದಿ ಹಾಕಿದನು.
               ರಾಷ್ಟ್ರಕೂಟರು ಕಲೆ, ಸಾಹಿತ್ಯದ ಆರಾಧಕರಾಗಿದ್ದರು. ಇವರ ಕಾಲದಲ್ಲಿ ಅನೇಕ ದೇವಾಲಯಗಳು ಹಾಗೂ ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವಲ್ಲದೆ, ರಾಮೇಶ್ವರದಲ್ಲಿ ಗುಹಾಂತರದೇವಾಲಯ ಹಾಗೂ ಮಹಾಕೂಟ, ಲಕ್ಷ್ಮೇಶ್ವರ, ರೋಣ, ಲಕ್ಕುಂಡಿ, ಕಡೂರು, ಕಳಸಾಪುರ, ಸಿರಿವಾಳ, ಸವಡಿ ಮುಂತಾದೆಡೆ ಹಲವಾರು ದೇವಾಲಯಗಳನ್ನು ನಿರ್ಮಿಸಿದರು.
     

No comments:

Post a Comment