ಬಾದಾಮಿಯ ಚಾಲುಕ್ಯರು (ಕ್ರಿ. ಶ. ೫೦೦-೭೫೭):-
ಶಾಸನಗಳಿಂದ ಜಯಸಿಂಹನೆಂಬುವವನನ್ನು ಬಾದಾಮಿಯ ಚಾಲುಕ್ಯರ ಮೂಲ ಪುರುಷನೆನ್ನಬಹುದಾದರೂ, ಒಂದನೇ ಪುಲಿಕೇಶಿಯು ಚಾಲುಕ್ಯ ಸಂತತಿಯ ನಿಜವಾದ ಸಂಸ್ಥಾಪಕನಾಗಿದ್ದಾನೆ. ಈತ ಚಾಲುಕ್ಯರ ಮೊದಲ ಸ್ವಾತಂತ್ರ ದೊರೆ. ಚಾಲುಕ್ಯರು ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಒರಿಸ್ಸಾ, ಮಧ್ಯಪ್ರದೇಶ ಹಾಗೂ ಗುಜರಾತ್ ನ ಹಲವಾರು ಪ್ರದೇಶಗಳನ್ನು ಸೇರಿಸಿ ರಾಜ್ಯಭಾರ ಮಾಡಿದರು. ಇವರು ವೈಷ್ಣವ ಹಾಗೂ ಶೈವ ಮತಾವಲಂಬಿಗಳಾಗಿದ್ದರು. 'ವರಾಹ' ಬಾದಾಮಿ ಚಾಲುಕ್ಯರ ಲಾಂಛನವಾಗಿತ್ತು. ಒಂದನೇ ಪುಲಿಕೇಶಿಯು ಕದಂಬರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದನು. ಬಾದಾಮಿಯ ಕೋಟೆಯನ್ನು ನಿರ್ಮಿಸಿದವನು ಇವನೆ. ಇವನ ನಂತರ ಒಂದನೇ ಕೀರ್ತಿವರ್ಮ(ಕ್ರಿ. ಶ. ೫೬೭-೫೯೮)ನು ಅಧಿಕಾರಕ್ಕೆ ಬಂದನು. ಈತನು ಬಾದಾಮಿಯ ವೈಷ್ಣವ ಗುಹಾಲಯವನ್ನು ನಿರ್ಮಿಸಿದನು.
ಎರಡನೇ ಪುಲಿಕೇಶಿ (ಕ್ರಿ. ಶ. ೬೦೯-೬೪೨) ಬಾದಾಮಿ ಚಾಲುಕ್ಯರ ಅತ್ಯಂತ ಶ್ರೇಷ್ಠ ದೊರೆ. ಇವನು ದಕ್ಷ ಆಡಳಿತಗಾರ, ಪರಾಕ್ರಮಿಯಾಗಿದ್ದನು. ಕ್ರಿ. ಶ. ೬೩೪ ರಲ್ಲಿ ರವಿಕೀರ್ತಿಯಿಂದ ರಚಿಸಲ್ಪಟ್ಟ ಐಹೊಳೆ ಶಾಸನವು ಇಮ್ಮಡಿ ಪುಲಿಕೇಶಿ ದಿಗ್ವಿಜಯದ ಬಗ್ಗೆ ವಿವರಣೆ ನೀಡುತ್ತದೆ. ಇವನು ಸ್ವತಂತ್ರವೆಂದು ಘೋಷಿಸಿಕೊಂಡ ಅನೇಕ ಸಾಮಂತರನ್ನು ಸೋಲಿಸಿದನಲ್ಲದೆ, ಬನವಾಸಿಯ ಕದಂಬರನ್ನು, ತಲಕಾಡಿನ ಗಂಗರನ್ನು, ಉತ್ತರದ ಮೌರ್ಯರನ್ನು ಸೋಲಿಸಿದನು. ಮೌರ್ಯರ ಹರ್ಷವರ್ಧನನೊಂದಿಗೆ ಪುಲಿಕೇಶಿಯು ಮಾಡಿದ ಯುದ್ಧವು ಅತ್ಯಂತ ಪ್ರಮುಖವಾದುದಾಗಿದೆ. 'ಉತ್ತರಾಪಥೇಶ್ವರ' ನೆಂಬ ಬಿರುದಾಂಕಿತ ಹರ್ಷವರ್ಧನನನ್ನು ಪುಲಿಕೇಶಿಯು ನರ್ಮದಾ ನದಿಯ ತೀರದಲ್ಲಿ ಸೋಲಿಸಿದನು. ಈ ವಿಜಯದಿಂದಾಗಿ ಪುಲಿಕೇಶಿಯು 'ಪರಮೇಶ್ವರ' ಎಂಬ ಬಿರುದನ್ನು ಪಡೆದನು. ಈತನು ಪಲ್ಲವರ ದೊರೆಯಾದ ಮಹೇಂದ್ರವರ್ಮನನ್ನು ಸೋಲಿಸಿದನಲ್ಲದೆ, ಚೋಳರು, ಕೇರಳರು, ಪಾಂಡ್ಯರನ್ನು ತನ್ನ ಅಧೀನಕ್ಕೊಳಪಡಿಸಿದನು. ಆದರೆ ತನ್ನ ಅಂತಿಮ ದಿನಗಳಲ್ಲಿ ಪುಲಿಕೇಶಿಯು ಪಲ್ಲವರ ನರಸಿಂಹವರ್ಮನಿಂದ ಪೆರಿಯಾಲ, ಮಣಿಮಂಗಲ ಮತ್ತು ಸುರಮಾರದ ಯುದ್ಧಗಳಲ್ಲಿ ಸೋಲಿಸಲ್ಪಟ್ಟನಲ್ಲದೆ, ಕ್ರಿ. ಶ. ೬೪೨ ರಲ್ಲಿ ನರಸಿಂಹ ವರ್ಮನು ಚಾಲುಕ್ಯರ ರಾಜಧಾನಿಯನ್ನು ವಶಪಡಿಸಿಕೊಂಡನು. ಈ ವಿಜಯದಿಂದ ನರಸಿಂಹವರ್ಮನು 'ವಾತಾಪಿಕೊಂಡ' ಎಂಬ ಬಿರುದನ್ನು ಗಳಿಸಿದನು.
ಅಪಾರ ಶೂರನಾಗಿದ್ದ ಇಮ್ಮಡಿ ಪುಲಿಕೇಶಿಯ ಆಸ್ಥಾನಕ್ಕೆ ಕ್ರಿ. ಶ. ೬೪೦ ರಲ್ಲಿ ಚೀನಿ ಬೌದ್ಧ ಯಾತ್ರಿಕ ಹ್ಯೂಯೆನ್ ತ್ಸಾಂಗನು ಭೇಟಿ ನೀಡಿದ್ದನು. ಪುಲಿಕೇಶಿಯ ನಂತರ ಅವನ ಮಗನಾದ ಒಂದನೇಯ ವಿಕ್ರಮಾದಿತ್ಯ (ಕ್ರಿ. ಶ. ೬೫೫-೮೧) ಅಧಿಕಾರಕ್ಕೆ ಬಂದನು. ಕ್ರಿ. ಶ. ೭೪೫ರಲ್ಲಿ ಅಧಿಕಾರಕ್ಕೆ ಬಂದ ಇಮ್ಮಡಿ ಕೀರ್ತಿವರ್ಮನು ತನ್ನ ದೌರ್ಬಲ್ಯಗಳಿಂದಾಗಿ ಚಾಲುಕ್ಯ ಸಂತತಿಯ ನಾಶಕ್ಕೆ ಕಾರಣನಾದನು.
ಬಾದಾಮಿಯ ಚಾಲುಕ್ಯರ ಅವಧಿಯಲ್ಲಿ ಕಲೆ, ಸಾಹಿತ್ಯಕ್ಕೆ ಅಪಾರ ಪ್ರೋತ್ಸಾಹವಿತ್ತು. ಚಾಲುಕ್ಯರು ಬಾದಾಮಿಯಲ್ಲಿ ೪ ಗುಹಾದೇವಾಲಯಗಳನ್ನು ಹಾಗೂ ಮಾಲಗತ್ತಿ ದೇವಾಲಯವನ್ನು ನಿರ್ಮಿಸಿದರು. ಇವಲ್ಲದೆ ಐಹೊಳೆಯಲ್ಲಿ ಶಿವದೇವಾಲಯ, ಜೈನ ದೇವಾಲಯವನ್ನು ಹಾಗೂ ಇನ್ನಿತರ ೭೦ ದೇವಾಲಯಗಳನ್ನು, ಪಟ್ಟದಕಲ್ಲಿನಲ್ಲಿ ೧೦ ದೇವಾಲಯಗಳನ್ನು ನಿರ್ಮಿಸಿದರು. ಮಂಗಳೇಶ ಎಂಬಾತನನ್ನು ಚಾಲುಕ್ಯರ ಶಿಲ್ಪಕಲೆಯ ಪಿತಾಮಹನೆನ್ನಲಾಗುತ್ತದೆ.
Monday, 26 March 2018
ಬಾದಾಮಿಯ ಚಾಲುಕ್ಯರು:-(ಕ್ರಿ. ಶ. ೫೦೦-೭೫೭)
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment