Monday, 26 March 2018

ಕಲ್ಯಾಣದ ಚಾಲುಕ್ಯರು (ಕ್ರಿ. ಶ. ೯೭೩-೧೨೦೦)

ಕಲ್ಯಾಣದ ಚಾಲುಕ್ಯರು :-
              ರಾಷ್ಟ್ರಕೂಟರ ಸಾಮಂತರಾಗಿದ್ದ ಇವರ ಇಮ್ಮಡಿ ತೈಲಪ(ಕ್ರಿ. ಶ. ೯೭೩-೯೯೭)ನು ರಾಷ್ಟ್ರಕೂಟರ ಕೊನೆಯ ದೊರೆ ಇಮ್ಮಡಿ ಕರ್ಕನನ್ನು ಕ್ರಿ. ಶ. ೯೭೩ ರಲ್ಲಿ ಸೋಲಿಸಿ, ಕಲ್ಯಾಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾಮ್ರಾಜ್ಯ ಸ್ಥಾಪಿಸಿದನು. ಹಾಗಾಗಿ ಇಮ್ಮಡಿ ತೈಲಪನು ಕಲ್ಯಾಣದ ಚಾಲುಕ್ಯರ ಮೂಲ ಪುರುಷನಾಗಿದ್ದಾನೆ. ಈತನ ನಂತರ ಇವನ ಮಗ ಸತ್ಯಾಶ್ರಯ( ಕ್ರಿ. ಶ. ೯೯೭-೧೦೦೮)ಅಧಿಕಾರಕ್ಕೆ ಬಂದನು. ಇವನು ಕನ್ನಡದ ಖ್ಯಾತ ಕವಿ ರನ್ನನಿಗೆ ಆಶ್ರಯದಾತನಾಗಿದ್ದನು. ಈತನು ಚೋಳರನ್ನು ಸೋಲಿಸಿದನಲ್ಲದೆ, ಚೋಳರ ರಾಜಕುಮಾರಿಯನ್ನು ವಿವಾಹವಾದನು. ತನ್ನ ಸಾಮ್ರಾಜ್ಯವನ್ನ ಅಸ್ಸಾಂ, ನೇಪಾಳದವರೆಗೂ ವಿಸ್ತರಿಸಿದನು. ಕಲ್ಯಾಣದ ಚಾಲುಕ್ಯರಲ್ಲಿ ಕ್ರಿ. ಶ. ೧೦೭೬ ರಲ್ಲಿ ಸಿಂಹಾಸನವೇರಿದ ಆರನೇ ವಿಕ್ರಮಾದಿತ್ಯ ಅತ್ಯಂತ ಶ್ರೇಷ್ಠ ದೊರೆ. ಈತ ಅತ್ಯಂತ ಪರಾಕ್ರಮಿ ಹಾಗೂ ಉತ್ತಮ ಆಡಳಿತಗಾರನಾಗಿದ್ದನು. ಕ್ರಿ. ಶ. ೧೦೭೬ರಲ್ಲಿ ವಿಕ್ರಮಶಕೆಯನ್ನು ಪ್ರಾರಂಭಿಸಿದವನು ಇವನೇ. ಸುಮಾರು ೫೦ ವರ್ಷಗಳ ಕಾಲ ಸಮರ್ಥವಾಗಿ ಅಧಿಕಾರ ನಡೆಸಿದ ವಿಕ್ರಮಾದಿತ್ಯನ 'ತ್ರಿಭುವನಮಲ್ಲ', 'ಪೆರ್ಮಾಡಿದೇವ' ಮೊದಲಾದ  ಬಿರುದುಗಳನ್ನು ಹೊಂದಿದ್ದನು. ಇವನು ಕ್ರಿ. ಶ. ೧೦೮೫ರಲ್ಲಿ ಚೋಳರ ಕುಲೋತ್ತುಂಗ  ಚೋಳನನ್ನು ಸೋಲಿಸಿದನು. ಕ್ರಿ. ಶ. ೧೦೮೮ರಲ್ಲಿ ವೆಂಗಿಯ ಮೇಲೆ ದಾಳಿ ಮಾಡಿ ಗೆದ್ದುಕೊಂಡನು. ಕ್ರಿ. ಶ. ೧೧೨೨ರಲ್ಲಿ ಹೊಯ್ಸಳರ ವಿಷ್ಣುವರ್ಧನನ್ನು ಹಲಸೂರ ಹಾಗೂ ಹೊಸವೀಡು ಕದನಗಳಲ್ಲಿ ಸೋಲಿಸಿದನು. ಈತನು ಸಿಂಹಳದ ದೊರೆ ವಿಜಯಬಾಹುವಿನೊಡನೆ ಸಂಪರ್ಕ ಹೊಂದಿದ್ದನು. ವಿಕ್ರಮಾದಿತ್ಯನು ತನ್ನೆಲ್ಲಾ ವಿಜಯಗಳಿಂದಾಗಿ ಚಾಲುಕ್ಯ ಸಾಮ್ರಾಜ್ಯವನ್ನು ಸಾಮ್ರಾಜ್ಯವನ್ನು  ಸಾಕಷ್ಟು ವಿಸ್ತರಿಸಿದನು. ಈತನು ಕಲೆ ಹಾಗೂ ಸಾಹಿತ್ಯದ ಆರಾಧಕನಾಗಿದ್ದನು. ಹಲವಾರು ವಿದ್ವಾಂಸರಿಗೆ ಆಶ್ರಯದಾತನಾಗಿದ್ದನು.
                ವಿಕ್ರಮಾದಿತ್ಯನ ನಂತರ ಅವನ ಮಗ ಮೂರನೇ ಸೋಮೇಶ್ವರ (ಕ್ರಿ. ಶ. ೧೧೨೭-೧೧೩೭) ಸಿಂಹಾಸನವೇರಿದನು. ಸ್ವತಃ ಕವಿಯಾಗಿದ್ದ ಈತ 'ಅಭಿಲಾಷಿತಾರ್ಥ ಚಿಂತಾಮಣಿ' ಎಂಬ ಗ್ರಂಥವನ್ನು ರಚಿಸಿದನು. ಈತನ ನಂತರ ಬಂದ ದೊರೆಗಳು ಅಷ್ಟು ಪ್ರಬಲರಾಗಿರಲಿಲ್ಲ. ಕ್ರಿ. ಶ. ೧೨೦೦ರ ಸುಮಾರಿಗೆ ಚಾಲುಕ್ಯ ಸಾಮ್ರಾಜ್ಯದ ಅವನತಿ ಹೊಂದಿತು.

No comments:

Post a Comment