ಹೊಯ್ಸಳರು :-
ಚಾಲುಕ್ಯರ ಪತನಾನಂತರ ದಕ್ಷಿಣ ಕರ್ನಾಟಕದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಹೊಯ್ಸಳರು ಸುಮಾರು ಮೂರು ಶತಮಾನಗಳ ಕಾಲ ಕರ್ನಾಟಕದ ಹೆಚ್ಚಿನ ಭಾಗವನ್ನು ಆಳಿದರು. ಸಳ ಎಂಬುವನು ಹೊಯ್ಸಳರ ಮೂಲ ಪುರುಷ. ಚಿಕ್ಕಮಗಳೂರು ಜಿಲ್ಲೆಯ ಸಸವೂರು ಇವರ ಮೂಲ ಸ್ಥಳವೆನ್ನಲಾಗಿದೆ. ನೃಪಕಾಮ ಎಂಬುವವನು ಹೊಯ್ಸಳರ ಮೊದಲ ದೊರೆ ಎಂದು ಕೆಲವು ಶಾಸನಗಳು ತಿಳಿಸುತ್ತವೆ. ಇವನೇ ಸಳ ಇರಬೇಕೆಂದು ಊಹಿಸಲಾಗಿದೆ. ಹೋರಾಡುತ್ತಿರುವ ವೀರನ ಚಿತ್ರ ಹೊಯ್ಸಳರ ಲಾಂಛನವಾಗಿತ್ತು.
ಕ್ರಿ.ಶ. ೧೦೦೬ರಲ್ಲಿ ನೃಪಕಾಮನು ಸೊಸೆಯುರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಒಟ್ಟುಗೂಡಿಸಿ ಚಿಕ್ಕದಾದ ರಾಜ್ಯವೊಂದನ್ನು ಸ್ಥಾಪಿಸಿದನು. ಪಶ್ಚಿಮ ಘಟ್ಟದಲ್ಲಿ ವಾಸಿಸುತ್ತಿದ್ದ 'ಮಾಲೆಪರು' ಎಂಬ ಗಿರಿಜನ ಪಾಳೇಗಾರರನ್ನು ಸೋಲಿಸಿದನು. ನೃಪಕಾಮನ ನಂತರ ಅವನ ಮಗ ವಿನಯಾಧಿತ್ಯ (ಕ್ರಿ. ಶ. ೧೦೪೭-೯೮) ಸಿಂಹಾಸನವೇರಿದನು. ಇವನು ಚೆಂಗಾಳ್ವರನ್ನು, ಕೊಂಗಾಳ್ವರನ್ನು ಸೋಲಿಸಿದನು. ವಿನಯಾಧಿತ್ಯನು ತನ್ನ ರಾಜಧಾನಿಯನ್ನು ಸೊಸೆಯುರಿನಿಂದ ಹಳೇಬೀಡಿಗೆ ವರ್ಗಾಯಿಸಿ ಅದಕ್ಕೆ ದ್ವಾರಸಮುದ್ರ ಎಂದು ನಾಮಕರಣ ಮಾಡಿದನು. ವಿನಯಾಧಿತ್ಯನ ನಂತರ ಎರೆಯಂಗ (ಕ್ರಿ. ಶ. ೧೦೯೮-೧೧೦೨), ಒಂದನೇ ಬಲ್ಲಾಳ(ಕ್ರಿ. ಶ. ೧೧೦೨-೧೧೦೭) ರಾಜ್ಯಭಾರ ನಡೆಸಿದರು. ಒಂದನೇ ಬಲ್ಲಾಳನ ನಂತರ ಸಿಂಹಾಸನವೇರಿದ ಅವನ ತಮ್ಮ ವಿಷ್ಣುವರ್ಧನ ಅಥವಾ ಬಿಟ್ಟಿಗದೇವ ಹೊಯ್ಸಳರ ಅತ್ಯಂತ ಶ್ರೇಷ್ಠ ದೊರೆ. ಇವನು ಕ್ರಿ. ಶ. ೧೧೧೪ರಲ್ಲಿ ನಡೆದ ತಲಕಾಡು ಯುದ್ಧದಲ್ಲಿ ಚೋಳರ ಪ್ರಾಂತಾಧಿಕಾರಿ ಆದಿಯಮನನ್ನು ಸೋಲಿಸಿದನು. ಅಲ್ಲದೆ ಈತನು ಉಚ್ಚಂಗೀಯ ಪಾಂಡ್ಯರನ್ನು, ಹಾನಗಲ್ಲಿನ ಕದಂಬರನ್ನು ಸೋಲಿಸಿ ತನ್ನ ರಾಜ್ಯವನ್ನು ತುಂಗಭದ್ರಾ ನದಿವರೆಗೆ ವಿಸ್ತರಿಸಿದನು. ವಿಷ್ಣುವರ್ಧನನು ತನ್ನ ಸಾಮ್ರಾಜ್ಯಕ್ಕೆ ಬಂದ ರಾಮಾನುಜಾಚಾರ್ಯರಿಗೆ ಆಶ್ರಯ ನೀಡಿದನು. ಈತನ ಪತ್ನಿ ಶಾಂತಲೆ ಖ್ಯಾತ ನೃತ್ಯ ಕಲಾವಿದೆಯಾಗಿದ್ದಳು. ವಿಷ್ಣುವರ್ಧನನು ಕ್ರಿ. ಶ. ೧೧೧೮ ರಲ್ಲಿ ಹಾಸನ ಬಳಿಯ ಕಣ್ಣೆಗಾಲದಲ್ಲಿ ನಡೆದ ಯುದ್ಧದಲ್ಲಿ ಚಾಲುಕ್ಯರಿಗೆ ಸೋತನು. ಇದರಿಂದಾಗಿ ಅವನು ಚಾಲುಕ್ಯರ ಸಾಮಂತನಾಗಬೇಕಾಯಿತು. ಕ್ರಿ. ಶ. ೧೧೨೭ರಲ್ಲಿ ಚಾಲುಕ್ಯರ ವಿಕ್ರಮಾದಿತ್ಯನು ನಿಧನಾನಂತರ ವಿಷ್ಣುವರ್ಧನನು ಪುನಃ ತನ್ನ ರಾಜ್ಯ ವಿಸ್ತರಣೆಗೆ ಮುಂದಾದನು. ಕ್ರಿ. ಶ. ೧೧೪೦ ರಲ್ಲಿ ಗೋವಾದ ಕದಂಬರಾಜ ಜಯಕೇಸರಿಯನ್ನು ಸೋಲಿಸಿ ಲಕ್ಕುಂಡಿಯನ್ನ ಆಕ್ರಮಿಸಿಕೊಂಡನು. ಕ್ರಿ. ಶ. ೧೧೪೩ರಲ್ಲಿ ಚಾಲುಕ್ಯರಿಂದ ಪುನಃ ವಿಷ್ಣುವರ್ಧನನು ಸೋಲುಂಡನು. ಕ್ರಿ. ೧೧೫೨ ರಲ್ಲಿ ಅವನು ನಿಧನನಾದನು. ವಿಷ್ಣುವರ್ಧನನ ನಂತರ ವಿಜಯನರಸಿಂಹ (ಕ್ರಿ. ಶ. ೧೧೫೨-೧೧೭೩), ಎರಡನೇ ಬಲ್ಲಾಳ(ಕ್ರಿ. ಶ. ೧೧೭೩-೧೨೨೦) ರಾಜ್ಯಭಾರ ಮಾಡಿದರು. ಕ್ರಿ. ಶ. ೧೨೨೦ ರಲ್ಲಿ ಸಿಂಹಾಸನವೇರಿದ ಎರಡನೇ ನರಸಿಂಹ ಕ್ರಿ. ಶ ೧೨೩೫ ರವರೆಗೆ ರಾಜ್ಯಭಾರ ಮಾಡಿದನು. ಕ್ರಿ. ಶ. ೧೨೩೫ ರಲ್ಲಿ ಸಿಂಹಾಸನವೇರಿದ ಸೋಮೇಶ್ವರನು ರಾಜಧಾನಿಯನ್ನು ದ್ವಾರಸಮುದ್ರದಿಂದ ಕಣ್ಣಾನೂರಿಗೆ ಬದಲಾಯಿಸಿದನು. ಈತನು ತನ್ನ ಸಂಸ್ಥಾನವನ್ನು ಎರಡು ಭಾಗ ಮಾಡಿ ಹಿರಿಯ ಮಗ ೩ನೇ ನರಸಿಂಹ (ಕ್ರಿ. ಶ. ೧೨೫೭-೧೨೯೧)ನಿಗೆ ದ್ವಾರಸಮುದ್ರದ ಭಾಗವನ್ನು, ಕಿರಿಯ ಮಗ ರಾಮನಾಥ( ಕ್ರಿ,. ಶ. ೧೨೫೭-೧೨೯೬)ನಿಗೆ ಕಣ್ಣಾನೂರು ಕಡೆಯ ಭಾಗಗಳನ್ನು ನೀಡಿದನು. ೩ನೇ ನರಸಿಂಹನ ಮಗನಾದ ೩ನೇ ಬಲ್ಲಾಳನು ಇಡೀ ಹೊಯ್ಸಳ ಸಾಮ್ರಾಜ್ಯವನ್ನು ಆಳಲು ಪ್ರಯತ್ನಿಸಿದನು. ಈತನ ಅಧಿಕಾರದ ಸಮಯದಲ್ಲಿ ಶತೃಗಳ ಕಾಟ ವಿಪರೀತವಾಗಿತ್ತು. ೩ನೇ ಬಲ್ಲಾಳನ ನಂತರ ಅಧಿಕಾರಕ್ಕೆ ಬಂದ ಅವನ ಮಗ ವೀರ ವಿರೂಪಾಕ್ಷ ಅಥವಾ ನಾಲ್ಕನೇ ವೀರಬಲ್ಲಾಳನ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಅವನತಿ ಹೊಂದಿತು.
ಹೊಯ್ಸಳರು ಕಲೆ, ಸಾಹಿತ್ಯದ ಆರಾಧಕರಾಗಿದ್ದರು. ಬೇಲೂರಿನ ಚನ್ನಕೇಶವ, ಕಪ್ಪೆ ಚೆನ್ನಿಗರಾಯ ಹಳೇಬೀಡಿನ ಹೊಯ್ಸಳೇಶ್ವರ, ಕೇದಾರೇಶ್ವರ, ಸೋಮನಾಥಪುರದ ಕೇಶವ ದೇವಾಲಯ, ತಲಕಾಡಿನ ಕೀರ್ತಿನಾರಾಯಣ, ಬೆಳವಾಡಿಯ ವೀರನಾರಾಯಣ ದೇವಾಲಯ ಹಾಗೂ ಬಸದಿಹಳ್ಳಿಯ ಜಿನಾಲಯಗಳು ಹೊಯ್ಸಳರ ನಿರ್ಮಾಣಗಳಾಗಿವೆ.
Monday, 26 March 2018
ದ್ವಾರಸಮುದ್ರದ ಹೊಯ್ಸಳರು:-
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment