Wednesday, 23 May 2018

ಹಸಿರುಮನೆ ಪರಿಣಾಮ

         ಬೀಜಗಳು ಮೊಳಕೆಯೊಡೆಯಲು ಬೆಚ್ಚಗಿನ ವಾತಾವರಣ ಅಗತ್ಯವಿದೆ.  ಶೀತ ದೇಶದಲ್ಲಿ ಬೀಜಗಳು ಸುಲಭವಾಗಿ ಮೊಳಕೆಯೊಡೆಯುವುದಿಲ್ಲ. ಬೆಚ್ಚಗಿನ ವಾತಾವರಣವನ್ನು ಒದಗಿಸಲು ಪ್ಲಾಸ್ಟಿಕ್ ಅಥವಾ ಗಾಜಿನ ಮೇಲ್ಚಾವಣಿ ಮತ್ತು ಗೋಡೆಗಳಿಗಿರುವ ಮನೆಗಳನ್ನು ಕಟ್ಟುತ್ತಾರೆ. ಅವುಗಳನ್ನು ಹಸಿರುಮನೆಗಳು ಎನ್ನುವರು. ಇಲ್ಲಿ ಪ್ಲಾಸ್ಟಿಕ್ ಅಥವಾ ಗಾಜು ಉಷ್ಣವನ್ನು ಹೊರಗೆ ಹೋಗಲು ಬಿಡದೆ ಹಿಡಿದಿಟ್ಟುಕೊಳ್ಳುತ್ತದೆ. ಇದು ಹಸಿರು ಮನೆಯನ್ನು ಬೆಚ್ಚಗಿಡುತ್ತದೆ ಮತ್ತು ಬೀಜಗಳು ಮೊಳಕೆಯೊಡೆಯಲು ನೆರವಾಗುತ್ತದೆ.
      ‌‌‌    ಕಾರ್ಬನ್ ಡೈಆಕ್ಸೈಡ್, ಮೀಥೇನ್‌ ಮತ್ತು ನೈಟ್ರೋಜನ್ ಆಕ್ಸೈಡ್ ಗಳಂತಹ ವಾಯು ಮಾಲಿನ್ಯಕಾರಕಗಳು ನೀರಾವಿಯೊಂದಿಗೆ ಉಷ್ಣವು ವಾತಾವರಣದಿಂದ ಹೊರಹೋಗಲು ಬಿಡದೆ ವಾತಾವರಣದ ತಾಪವನ್ನು ಹೆಚ್ಚಿಸಿದಾಗ ಇದೇ ರೀತಿಯ ಪರಿಣಾಮ ಉಂಟಾಗುತ್ತದೆ. ಇದನ್ನು ಹಸಿರುಮನೆ ಪರಿಣಾಮ ಎನ್ನುವರು. ಈ ಪರಿಣಾಮಕ್ಕೆ ಕಾರಣವಾಗುವ ಅನಿಲಗಳನ್ನು ಹಸಿರು ಮನೆ ಅನಿಲಗಳು ( green house gases) ಎನ್ನುವರು.
ಒಂದು ವೇಳೆ ಹಸಿರುಮನೆ ಪರಿಣಾಮವು ಇಲ್ಲದೆ ಹೋಗಿದ್ದರೆ ಭೂಮಿಯ ತಾಪ ಘನೀಭವನ  ಬಿಂದು (freezing point) ವಿಗಿಂತಲೂ ಕಡಿಮೆ ಇರುತಿದ್ದು, ಜೀವಿಗಳ ಅಸ್ತಿತ್ವವು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ, ಭೂಮಿಯ ವಾತಾವರಣವನ್ನು ಬೆಚ್ಚಗಿರಿಸಲು ಮತ್ತು ಭೂಮಿಯ ಉಷ್ಣವನ್ನು ಸಮತೋಲನಗೊಳಿಸಲು ಹಸಿರುಮನೆ ಪರಿಣಾಮ ಅವಶ್ಯಕವಾಗಿದೆ. ಅದಾಗ್ಯೂ ಹಸಿರುಮನೆ ಅನಿಲಗಳ ಮಟ್ಟ ಅತಿಯಾದರೆ ಹಾನಿಕರ.

No comments:

Post a Comment